ನವದೆಹಲಿ, ಫೆ 05 (Daijiworld News/MB) : ದೆಹಲಿಯ ಶಾಹೀನ್ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಅಲ್ಲಿಗೆ ಬಂದು ಪ್ರತಿಭಟನಕಾರರತ್ತ ಗುಂಡು ಹಾರಿಸಿದ್ದ ಕಪಿಲ್ ಗುಜ್ಜರ್ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಹೇಳಿದ್ದು ಆಪ್ ಇದನ್ನು ನಿರಾಕರಿಸಿದೆ.
ಕಪಿಲ್ ಗುಜ್ಜರ್ ಶಾಹೀನ್ ಬಾಗ್ನ ಪ್ರತಿಭಟನಾ ಸ್ಥಳದಿಂದ ಸ್ವಲ್ಪ ದೂರದಲ್ಲೇ ಹಾಕಲಾಗಿದ್ದ ಬ್ಯಾರಿಕೇಡ್ ಬಳಿ ನಿಂತು "ಜೈ ಶ್ರೀರಾಮ್" ಎಂದು ಕೂಗುತ್ತಾ, ಗುಂಡು ಹಾರಿಸಿದ್ದ. ಆ ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಪೊಲೀಸರು ಕಪಿಲ್ ಗುಜ್ಜರ್ನನ್ನು ಎರಡು ದಿನಗಳ ತೀವ್ರ ವಿಚಾರಣೆ ನಡೆಸಿ ಮಂಗಳವಾರ ಆತ ಆಪ್ ಕಾರ್ಯಕರ್ತ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾನು ಎಎಪಿ ಕಾರ್ಯಕರ್ತ ಎಂದು ವಿಚಾರಣೆ ಸಂದರ್ಭದಲ್ಲಿ ಕಪಿಲ್ ಹೇಳಿದ್ದ ಬಳಿಕ ಆತನ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಆತನ ತಂದೆ ಎಎಪಿ ಸೇರ್ಪಡೆಯಾಗಿರುವ ಫೋಟೋಗಳು ಲಭ್ಯವಾಗಿವೆ ಎಂದು ದೆಹಲಿ ಸಿಸಿಬಿಯ ಹಿರಿಯ ಅಧಿಕಾರಿ ರಾಜೇಶ್ ದೇವ್ ಹೇಳಿದ್ದಾರೆ.
ಗುಂಡು ಹಾರಿಸಿದಾತ ಆಪ್ ಕಾರ್ಯಕರ್ತ ಎಂಬುದನ್ನು ಅಲ್ಲಗಳೆದಿರುವ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ , "ದೆಹಲಿ ಚುನಾವಣೆಗೆ ಇನ್ನು ಮೂರು ದಿನಗಳು ಉಳಿದಿವೆ. ಈ ಸಂದರ್ಭದಲ್ಲಿ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ" ಎಂದು ಕಿಡಿಕಾರಿದ್ದಾರೆ.
ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ ಈ ಬೆಳವಣಿಗೆಯ ಕುರಿತು ಮಾತನಾಡಿದ್ದು,"ಎಎಪಿಯ ಬಣ್ಣ ದೇಶದ ಜನರ ಎದುರು ಬಯಲಾಗಿದೆ. ಕೇಜ್ರಿವಾಲ್ ಅವರು ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡುತ್ತಿದ್ದಾರೆ, ಅಂತವರನ್ನು ದೇಶವು ಕ್ಷಮಿಸುವುದಿಲ್ಲ. ದೆಹಲಿ ಜನರು ಇದಕ್ಕೆ ಸೂಕ್ತ ಉತ್ತರ ನೀಡುತ್ತಾರೆ" ಎಂದು ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವಾಗ ದೆಹಲಿ ಪೊಲೀಸರು ಹೇಳಿಕೆಯನ್ನು ನೀಡಿರುವ ಸಮಯ ಮತ್ತು ಅದರ ಹಿಂದಿರುವ ಉದ್ದೇಶವನ್ನು ಪ್ರಶ್ನಿಸಿರುವ ಕೇಜ್ರಿವಾಲ್, ದೇವ್ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
"ಈ ಸಂಚಿನಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ? ಇಂತಹ ಹೇಳಿಕೆಗಳನ್ನು ನೀಡುವಂತೆ ದೇವ್ಗೆ ಗೃಹಸಚಿವ ಅಮಿತ್ ಶಾ ಸೂಚಿಸುತ್ತಿದ್ದಾರೆಯೇ? ಯಾರ ನಿರ್ದೇಶನದಿಂದ ದೇವ್ ಇಂತಹ ನೀಡಲು ಧೈರ್ಯ ಮಾಡಿದ್ದರು" ಎಂದು ಆಪ್ ನಾಯಕ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. "ತನಿಖೆ ಇನ್ನೂ ಪ್ರಗತಿಯಲ್ಲಿ ಇರುವ ಸಂದರ್ಭದಲ್ಲಿ ಶೂಟರ್ ಆಪ್ಗೆ ಸೇರಿದವನೆಂದು ದೇವ್ ಹೇಳಿದ್ದೇಕೆ' ಎಂದು ಅವರು ಪ್ರಶ್ನಿಸಿದ್ದಾರೆ.