ನವದೆಹಲಿ, ಫೆ 05 (Daijiworld News/MB) : ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ಸಿಟ್ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಹತ್ಯೆಯಾದ ಸಂಸದ ಏಹ್ಸಾನ್ ಜಾಫ್ರಿ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 14ರಂದು ನಡೆಸಲಿದೆ.
ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಪ್ರಕರಣದ ವಿಚಾರಣೆ ಮುಂದೂಡುವಂತೆ ಝಕಿಯಾ ಜಾಫ್ರಿ ವಕೀಲ ನ್ಯಾಯಾಲಯದಲ್ಲಿ ಮನವಿ ಮಾಡಿದ ಬಳಿಕ ವಿಚಾರಣೆಯನ್ನು ಎಪ್ರಿಲ್ 14ಕ್ಕೆ ಮುಂದೂಡಿದೆ.
ಝಕಿಯಾ ಜಾಫ್ರಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ಅಪರ್ಣಾ ಭಟ್, ಈ ಪ್ರಕರಣದ ವಿಷಯ ವಿವಾದಾಸ್ಪದವಾಗಿದೆ ಎಂದು ಹೇಳಿದ್ದಾರೆ.
ಅದಕ್ಕೆ ಉತ್ತರಿಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಹಲವು ಬಾರಿ ಮುಂದೂಡಲಾಗಿದೆ. ಏನೇ ಆಗಲಿ ನಾವು ಈ ಪ್ರಕರಣವನ್ನು ಕೆಲವು ದಿನಗಳಲ್ಲಿ ವಿಚಾರಣೆ ನಡೆಸಲಿದ್ದೇವೆ. ಒಂದು ದಿನಾಂಕವನ್ನು ತೆಗೆದುಕೊಳ್ಳಿ ನೀವೆಲ್ಲಾ ಹಾಜರಾಗುತ್ತೀರಾ ಎಂದು ಖಾತರಿಪಡಿಸಿಕೊಳ್ಳಿ ಎಂದು ಹೇಳಿತು.
2002 ಫೆಬ್ರವರಿ 27 ರಿಂದ 2002 ಮೇವರೆಗೆ ಭಾರೀ ಪಿತೂರಿಗೆ ಈ ಮನವಿ ಸಂಬಂಧಿಸಿರುವುದರಿಂದ ನೋಟಿಸು ನೀಡುವ ಅಗತ್ಯವಿದೆ ಎಂದು ಜಾಫ್ರಿ ವಕೀಲರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.