ನವದೆಹಲಿ, ಫೆ 05 (Daijiworld News/MB) : ದೆಹಲಿಯ ಶಾಹೀನ್ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರೆಡೆ ಗುಂಡು ಹಾರಿಸಿದ್ದ ಕಪಿಲ್ ಗುಜ್ಜರ್ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಹೇಳಿದ ಬೆನ್ನಲ್ಲೇ ಈ ಬಗ್ಗೆ ಹೇಳಿಕೆ ನೀಡಿರುವ ಕುಟುಂಬ ಆತ ಯಾವ ಪಕ್ಷದೊಂದಿಗೂ ನಂಟು ಹೊಂದಿಲ್ಲ ಎಂದು ಹೇಳಿದೆ.
ಕಪಿಲ್ ಹಾಗೂ ಆತನ ತಂದೆ 2019ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು ಎಂದು ಡಿಸಿಪಿ (ಅಪರಾಧ ದಳ) ರಾಜೇಶ್ ದೇವ್ ಹೇಳಿದ್ದರು.
ಈ ಹೇಳಿಕೆಯನ್ನು ಅಲ್ಲಗಳೆದಿರುವ ಕಪಿಲ್ ಅವರ ಸಂಬಂಧಿ ಫತೇಶ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿರುವ ಫೋಟೋ ಎಲ್ಲಿಂದ ದೊರೆತಿದೆ ಎಂದು ನನಗೆ ತಿಳಿದಿಲ್ಲ. ನನ್ನ ಅಳಿಯ ಕಪಿಲ್ ಮತ್ತು ಆತನ ಕುಟುಂಬ ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
ನನ್ನ ಸಹೋದರ ಗಜೇ ಸಿಂಗ್ (ಕಪಿಲ್ ಅವರ ಅಪ್ಪ) ಅವರು 2008ರಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್ ಪಡೆದು ಚುನಾವಣೆ ಸ್ಪರ್ಧಿಸಿ ಸೋತಿದ್ದರು. ಅದರ ಬಳಿಕ ನಮ್ಮ ಕುಟುಂಬದ ಯಾರೂ ಕೂಡಾ ಯಾವುದೇ ಪಕ್ಷದ ನಂಟು ಹೊಂದಿಲ್ಲ. ಕಪಿಲ್ಗೆ ಆಮ್ ಆದ್ಮಿ ಆಗಲಿ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ನಂಟು ಇರುವ ಸ್ನೇಹಿತರೂ ಇಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಪೊಲೀಸರು ಗಜೇ ಸಿಂಗ್ 2012ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದರು ಎಂದು ಹೇಳುತ್ತಿದ್ದಾರೆ. ಪೊಲೀಸರು ಕಪಿಲ್ನ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು ವಾಟ್ಸ್ಆ್ಯಪ್ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.