ನವದೆಹಲಿ, ಫೆ 5 (Daijiworld News/MSP): ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಸುಮಾರು ಮೂರು ತಿಂಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮ್ ಮಂದಿರ ನಿರ್ಮಾಣದ ಮೇಲ್ವಿಚಾರಣೆ ನಡೆಸುವ 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ' ಟ್ರಸ್ಟ್ ನ್ನು ರಚಿಸಲಾಗುವುದು ಎಂದು ನರೇಂದ್ರ ಮೋದಿ ಬುಧವಾರ ಪ್ರಕಟಿಸಿದ್ದಾರೆ.
"ನಾವು ಅಯೋಧ್ಯೆಯ ರಾಮ ಮಂದಿರದ ಅಭಿವೃದ್ಧಿಗೆ ಒಂದು ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಇದಕ್ಕಾಗಿ ಟ್ರಸ್ಟ್ ರಚಿಸಲಾಗುವುದು, ಇದನ್ನು 'ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ' ಎಂದು ಕರೆಯಲಾಗುತ್ತದೆ" ಎಂದು ಪ್ರಧಾನಿ ಲೋಕಸಭೆಯಲ್ಲಿ ಹೇಳಿದರು.
"ಸುಪ್ರೀಂ ಕೋರ್ಟ್ ನ ನಿರ್ದೇಶನಗಳನ್ನು ಅನುಸರಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ರಾಮ ಮಂದಿರದ ನಿರ್ಮಾಣಕ್ಕಾಗಿ ಕ್ಯಾಬಿನೆಟ್ ವಿವರವಾದ ಯೋಜನೆಯನ್ನು ಸಿದ್ಧಪಡಿಸಿದೆ. ಸುಪ್ರೀಂ ನಿರ್ದೇಶನದಂತೆ ಉನ್ನತ ನ್ಯಾಯಾಲಯದಲ್ಲಿ, ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ "ಎಂದು ಮೋದಿ ಕೆಳಮನೆಗೆ ತಿಳಿಸಿದರು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಇದನ್ನು ಉತ್ತರ ಪ್ರದೇಶ ಸರ್ಕಾರ ಒಪ್ಪಿಕೊಂಡಿದೆ ಎಂದು ಇದೇ ವೇಳೆ ತಿಳಿಸಿದರು.