ಹೈದರಾಬಾದ್, ಫೆ 05 (Daijiworld News/MB) : ದಿಶಾ ಕಾಯ್ದೆಯನ್ನು ಆಂಧ್ರಪ್ರದೇಶ ಸರ್ಕಾರ ಜಾರಿಗೆ ತಂದ ಬೆನ್ನಲ್ಲೇ ಈಗ ರಾಜ್ಯದ ರಾಜಮಹೇಂದ್ರವರಂ(ರಾಜಮಂಡ್ರಿ)ನಲ್ಲಿ ಮೊದಲ ದಿಶಾ ಪೊಲೀಸ್ ಠಾಣೆ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೆ.7ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ(ರಾಮಮಹೇಂದ್ರವರಂ)ಯಲ್ಲಿ ಮೊದಲ ದಿಶಾ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ಜಗನ್ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಮಹಿಳೆಯರ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿ ಸೇರಿದಂತೆ ಫೋಸ್ಕೋ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಶೀಘ್ರ ವಿಚಾರಣೆ ಮಾಡಿ ಅಪರಾಧಿಗೆ 21 ದಿನಗಳಲ್ಲಿಯೇ ಕಠಿಣ ಶಿಕ್ಷೆ ವಿಧಿಸುವ ಉದ್ದೇಶದಿಂದ ದಿಶಾ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಆಂಧ್ರ ಸರ್ಕಾರವು ಮೊದಲ ಹಂತದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಸುಮಾರು 18 ದಿಶಾ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದೆ.
ರಾಜಮಹೇಂದ್ರವರಂನಲ್ಲಿ ಸುಮಾರು 4000 ಚದರ ಅಡಿಯ ಎರಡು ಮಹಡಿಯ ದಿಶಾ ಪೊಲೀಸ್ ಠಾಣೆ ನಿರ್ಮಾಣಗೊಂಡಿದ್ದು ಪೊಲೀಸ್ ಠಾಣೆಯಲ್ಲಿ ದೊಡ್ಡದಾದ ಹಾಲ್, ಕೌನ್ಸೆಲಿಂಗ್ ಹಾಲ್, ಫೀಡಿಂಗ್ ಹಾಲ್ ಅನ್ನು ಒಳಗೊಂಡಿದೆ. ಹಾಗೆಯೇ ಮೇಲ್ವಿಚಾರಣೆ ನಡೆಸಲು ದಿಶಾ ಪೊಲೀಸ್ ಠಾಣೆಗೆ ಇಬ್ಬರು ಡಿಎಸ್ಪಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದೆ.