ಶಿವಮೊಗ್ಗ, ಫೆ.05 (Daijiworld News/PY) : "ಸಚಿವ ಸಂಪುಟ ವಿಸ್ತರಣೆ ಫೆ.6 ಗುರುವಾರದಂದು ನಡೆಯಲಿದ್ದು, 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಫೆ.6 ಗುರುವಾರದಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನ ಸಚಿವರಿಗೆ 2-3 ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುತ್ತದೆ" ಎಂದು ತಿಳಿಸಿದರು.
ಪಕ್ಷದಲ್ಲಿನ ಸಚಿವ ಸ್ಥಾನ ಆಕಾಂಕ್ಷಿಗಳ ಬಗ್ಗೆ ಮಾತನಾಡಿದ ಅವರು, "ಪಕ್ಷದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿರುವುದು ಸಹಜ. ಸಿಎಂ ಅವರು ಇದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಸೋತ ಹಾಗೂ ಗೆದ್ದ ಶಾಸಕರಿಗೆ ಸಚಿವ ಸ್ಥಾನದ ವಿಚಾರವಾಗಿ ಕೇವಲ ಚರ್ಚೆ ಮಾತ್ರ ನಡೆಯುತ್ತಿದ್ದು, ಇದು ಮಾಧ್ಯಮಗಳಿಂದ ಬರುತ್ತಿರುವ ಸುದ್ದಿಯಾಗಿದೆ" ಎಂದರು.
"ಸರ್ಕಾರ ಬರಲು ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಪ್ರಮುಖ ಕಾರಣರಾಗಿದ್ದಾರೆ. ಹಾಗಾಗಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಹೈಕಮಾಂಡ್ ಸಿಎಂ ಬಿಎಸ್ವೈ ಅವರ ಕೈ ಕಟ್ಟಿಹಾಕಿಲ್ಲ. ಹಾಗಾಗಿ ಸಿಎಂ ಬಿಎಸ್ವೈ ಅವರು ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಲು ಸ್ವತಂತ್ರರು. ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಯಾವುದೇ ಗೊಂದಲ ಇರುತ್ತಿರಲಿಲ್ಲ" ಎಂದು ಹೇಳಿದರು.