ನವದೆಹಲಿ, ಫೆ.05 (Daijiworld News/PY) : ಬುರ್ಖಾ ಧರಿಸಿ ರಹಸ್ಯವಾಗಿ ವಿಡಿಯೋ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ದಿ ರೈಟ್ ನರೇಟಿವ್ ಎಂಬ ಚಾನೆಲ್ ನಡೆಸುತ್ತಿರುವ ಪತ್ರಕರ್ತೆ ಹಾಗೂ ಯೂಟ್ಯೂಬರ್ ಗುಂಜಾ ಕಪೂರ್ ಅವರ ಮೇಲೆ ಶಾಹೀನ್ಬಾಗ್ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.
ವಿಡಿಯೋ ಮಾಡುತ್ತಿರುವ ಸಂದರ್ಭ ಗುಂಜಾ ಕಪೂರ್ ಅವರು ಬುರ್ಖಾ ಧರಿಸಿದ್ದು, ರಹಸ್ಯವಾಗಿರಿಸಲು ಯತ್ನಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ. ಇತ್ತೀಚೆಗೆ ಹಿರಿಯ ಪತ್ರಕರ್ತರಾದ ದೀಪಕ್ ಚೌರಾಸಿಯಾ ಅವರ ಮೇಲೂ ಶಾಹೀನ್ಬಾಗ್ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದಾರೆ.
ಗುಂಜಾ ಕಪೂರ್ ಅವರು ಶಾಹೀನ್ಬಾಗ್ ಪ್ರತಿಭಟನಾಕಾರರ ಬಳಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಈ ಸಂದರ್ಭ ಪ್ರತಿಭಟನಾಕಾರರು ಗುಂಜಾ ಕಪೂರ್ ಅವರ ಬಳಿ ಕ್ಯಾಮರಾ ಇರುವುದನ್ನು ಗಮನಿಸಿದ್ದು, ಕೆಲವು ಮಹಿಳಾ ಪ್ರತಿಭಟನಾಕಾರರು ಆಕೆಯ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಘಟನೆಯನ್ನು ನೋಡುತ್ತಿದ್ದ ಜನರನ್ನು ದೂರ ಕಳುಹಿಸಲು ಯತ್ನಿಸಿದ ಪೊಲೀಸರು ಬಳಿಕ ಗುಂಜಾ ಕಪೂರ್ ಅವರನ್ನು ಸುರಕ್ಷಿತವಾಗಿ ಸಮೀಪದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಗುಂಜಾ ಕಪೂರ್ ಅವರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.