ಚನ್ನಪಟ್ಟಣ, ಫೆ 05 (Daijiworld News/MB) : ಅಪರಿಚಿತ ವ್ಯಕ್ತಿ ತನ್ನ ಬ್ಯಾಂಕ್ ಖಾತೆಗೆ 30 ಕೋಟಿ ರೂ. ಜಮೆ ಮಾಡಿದ್ದರಿಂದ ಆಶ್ಚರ್ಯಗೊಂಡ 30 ವರ್ಷದ ಹೂ ಮಾರುವ ಮಹಿಳೆ ಪೊಲೀಸ್ ಠಾಣೆಗೆ ಈ ಬಗ್ಗೆ ತನಿಖೆ ನಡೆಸಿ ಈ ಹಣವನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ದೂರು ನೀಡಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ ಮಹಿಳೆ ರೆಹನಾ ಬಾನು ತಾನು ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಖಾತೆಗೆ ಅಪರಿಚಿತ ವ್ಯಕ್ತಿ 29.99 ಕೋಟಿ ರೂ. ಜಮೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಮಹಿಳೆ ಹಾಗೂ ಆಕೆಯ ಪತಿ ಸೈಯದ್ ಮಲ್ಲಿಕ್ ಬುರಾನ್ ಅಲಿಯಾಸ್ ಇಮ್ರಾನ್ ತಮ್ಮ ಖಾತೆಗೆ ಅನಾಮಧೇಯ ವ್ಯಕ್ತಿಯಿಂದ ಅಷ್ಟೊಂದು ಹಣ ಜಮೆಯಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದಾಗೀ ಎರಡು ತಿಂಗಳಾದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ದಂಪತಿಗಳು ಮಾಧ್ಯಮದ ಮುಂದೆ ಈ ವಿಚಾರವನ್ನು ತೆರೆದಿಡಲು ನಿರ್ಧಾರ ಮಾಡಿದ್ದಾರೆ.
2015 ರಲ್ಲಿ ರೆಹನಾ ಬಾನು ಕೇಂದ್ರ ಸರ್ಕಾರದ ಜನಧನ್ ಯೋಜನೆ ಭಾಗವಾಗಿ ಶೂನ್ಯ ಮೊತ್ತದಲ್ಲಿ ಈ ಖಾತೆಯನ್ನು ತೆರೆದಿದ್ದಾರೆ. 2019ರ ಡಿಸೆಂಬರ್ 2 ರಂದು ಅವರ ಮನೆಗೆ ಬ್ಯಾಂಕ್ ಅಧಿಕಾರಿಯೊಬ್ಬರು ಬಂದು ನಿಮ್ಮ ಖಾತೆಯಲ್ಲಿ ಇಷ್ಟೊಂದು ಮೊತ್ತ ಎಲ್ಲಿಂದ ಎಂದು ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲೇ ಈ ಮಹಿಳೆಗೆ ತನ್ನ ಖಾತೆಯಲ್ಲಿ 30 ಕೋಟಿ ರೂಪಾಯಿ ಜಮೆ ಆಗಿರುವುದು ತಿಳಿದು ಬಂದಿದೆ. ಹಾಗೆಯೇ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ಗೆ ಭೇಟಿ ನೀಡಿ ಆಧಾರ್ ಕಾರ್ಡ್ ನೀಡಿ ಆ ಹಣವನ್ನು ಬ್ಯಾಂಕ್ನಿಂದ ಹಿಂಪಡೆಯಲು ಹೇಳಿದ್ದರು.
ರೆಹಾನಾ ಬ್ಯಾಂಕ್ಗೆ ಭೇಟಿ ನೀಡಿದಾಗ ಮಹಿಳಾ ಅಧಿಕಾರಿಯೊಬ್ಬರು ತಾನು ಹಣ ಸ್ವೀಕರಿಸಿಲ್ಲ, ಎಂಬುದಾಗಿ ಶೂನ್ಯ ಮೊತ್ತ ಖಾತೆಯ ಅರ್ಜಿಯೆಂದು ಹೇಳಿ ಮೂರು ಸಹಿ ಹಾಕಲು ಹೇಳಿದರು. ಈ ಸಂದರ್ಭದಲ್ಲಿ ರೆಹಾನಾ ಈ ಅರ್ಜಿಗೆ ಸಹಿ ಹಾಕಲು ಒಪ್ಪಿಲ್ಲ. ಆದರೆ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ರೆಹಾನಾ ಅವರ ಬ್ಯಾಂಕ್ ಖಾತೆಯ ವಿವರವನ್ನು ಯಾರಿಗಾದರೂ ನೀಡಿದ್ದೀರ ಎಂದು ಕೇಳಿದಾಗ ರೆಹಾನಾಳ ಪತಿ, "ನಾವು ಆನ್ಲೈನ್ ಮುಖೇನ ಸೀರೆ ಖರೀದಿ ಮಾಡಿದ್ದೆವು. ಆ ಸಂದರ್ಭದಲ್ಲಿ ಯಾರೋ ಕರೆ ಮಾಡಿ ನೀವು ವಿಜೇತರಾಗಿದ್ದೀರಿ ನಿಮಗೆ ಕಾರು ಲಭಿಸಿದೆ ಎಂದು ಹೇಳಿದ್ದರು. ಆದರೆ ನಾವು ಬಡವರು ನಮಗೆ ಹಣದ ಅಗತ್ಯವಿದೆ ಆ ಹಿನ್ನಲೆಯಲ್ಲಿ ಹಣ ನೀಡುವಂತೆ ಕೇಳಿದ್ದೆವು. ಖಾತೆಯ ವಿವರವನ್ನು ಪಡೆದ ವ್ಯಕ್ತಿ ಆ ಬಳಿಕ ಕರೆ ಮಾಡಿಲ್ಲ. ಆ ಬಳಿಕ ನಾನು ಅನುಮಾನದಿಂದ ಎಟಿಎಂ ಮೂಲಕ ನನ್ನ ಬ್ಯಾಂಕ್ ಮೊತ್ತ ಪರಿಶೀಲಿಸಿದಾಗ ಅಷ್ಟೊಂದು ಮೊತ್ತ ನನ್ನ ಖಾತೆಗೆ ಜಮೆಯಾಗಿರುವುದು ತಿಳಿದು ಬ್ಯಾಂಕ್ಗೆ ಹೋಗಿ ತಿಳಿಸಿದ್ದೇವೆ. ಆದರೆ ಬ್ಯಾಂಕ್ ಅಧಿಕಾರಿಗಳು ನಮ್ಮ ಖಾತೆಯನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಅಂದಿನಿಂದ ಈ ಖಾತೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಐಟಿ ಅಧಿಕಾರಿಗಳ ಬಳಿ ಹಾಗೂ ಪೊಲೀಸರ ಬಳೀ ಅಲೆದಾಡುತ್ತಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಂದು ಹೇಳಿದ್ದಾರೆ.
ಅಂತಿಮವಾಗಿ ಇಮ್ರಾನ್ ರಾಮನಗರದಲ್ಲಿರುವ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿದ್ದು, ಓರ್ವ ಪೊಲೀಸ್ ಅಧಿಕಾರಿ ಖಾತೆಯಲ್ಲಿ ಹಣವಿರುವುದನ್ನು ಪರಿಶೀಲಿಸಿ ದೂರು ದಾಖಲು ಮಾಡಿದ್ದಾರೆ. ಸರ್ಕಾರವು ಈ ಹಣವನ್ನು ಪಡೆದುಕೊಳ್ಳಬೇಕು ಹಾಗೂ ನಮ್ಮನ್ನು ನಿರಪರಾಧಿ ಎಂದು ಸಾಬೀತು ಪಡಿಸಬೇಕೆಂದು ಇಮ್ರಾನ್ ಅವರು ಕೋರಿದ್ದಾರೆ.
ಇತ್ತೀಚೆಗೆ ಓರ್ವ ವ್ಯಕ್ತಿ ಕರೆ ಮಾಡಿ ರೆಹನಾ ಅವರ ಖಾತೆಗೆ ಹಣ ಜಮೆ ಮಾಡಿರುವುದಾಗಿ ಹೇಳಿದ್ದು 15 ಕೋಟಿ ಹಿಂದಕ್ಕೆ ನೀಡಿ ಉಳಿದ 15 ಕೋಟಿಯನ್ನು ದಂಪತಿಗಳು ಪಡೆಯುವಂತೆ ಹೇಳಿರುವುದಾಗಿ ಇಮ್ರಾನ್ ಅವರು ತಿಳಿಸಿದ್ದಾರೆ.