ನವದೆಹಲಿ, ಫೆ 05 (Daijiworld News/MB) : ದೆಹಲಿ ನಿರ್ಭಯಾ ಅತ್ಯಾಚಾರಿಗಳು ತಮ್ಮ ಕಾನೂನಾತ್ಮಕ ಹೋರಾಟಗಳನ್ನು ಇನ್ನು ಒಂದು ವಾರದಲ್ಲಿ ಪೂರ್ಣ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರದ ತೀರ್ಪು ನೀಡಿದ್ದು ಈ ತೀರ್ಪನ್ನು ನಿರ್ಭಯಾ ತಾಯಿ ಆಶಾ ದೇವಿ ಸ್ವಾಗತಿಸಿದ್ದಾರೆ.
ಈ ಕುರಿತಾಗಿ ಕೋರ್ಟ್ನ ಹೊರ ಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಶಾ ದೇವಿ ಅವರು, "ನಾನು ದೆಹಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಕೋರ್ಟ್ ಅಪರಾಧಿಗಳಿಗೆ ಕಾನೂನಿನಲ್ಲಿ ಇರುವ ಎಲ್ಲ ಅವಕಾಶಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದೆ. ಅಪರಾಧಿಗಳಿಗಿರುವ ಕಾನೂನಿನ ದಾರಿಗಳೆಲ್ಲವೂ ಪೂರ್ಣಗೊಂಡ ಬಳಿಕ ಶೀಘ್ರವೇ ಶಿಕ್ಷೆ ಜಾರಿಯಾಗಲಿದೆ" ಎಂದು ನಿರ್ಭಯಾ ತಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳು ತಮಗಿರುವ ಕಾನೂನಿನ ಅವಕಾಶಗಳನ್ನು ಇನ್ನೊಂದು ವಾರದಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಅರ್ಜಿ ಇದ್ದರೂ ಅದನ್ನು ಇಂದಿನಿಂದ ಒಂದು ವಾರದೊಳಗೆ ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರ ತಿಳಿಸಿತು.
ಅಲ್ಲದೆ, ಪ್ರಕರಣ ಆರೋಪಿಗಳನ್ನು ಒಟ್ಟಾಗಿಯೇ ಗಲ್ಲಿಗೇರಿಸಬೇಕು. ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಶಿಕ್ಷೆ ಜಾರಿ ಮಾಡಲು ಸಾಧ್ಯವಿಲ್ಲ, ಒಂದು ಪ್ರಕರಣದ ಆರೋಪಿಗಳ ಪೈಕಿ, ಒಬ್ಬ ಆರೋಪಿಯ ದಯಾ ಅರ್ಜಿ ಬಾಕಿ ಇರುವಾಗ ಇನ್ನುಳಿದವರಿಗೆ ಶಿಕ್ಷೆ ಜಾರಿ ಮಾಡಬಹುದು ಎಂದು ಕಾನೂನಿನಲ್ಲಿ ಹೇಳಿಲ್ಲ, ಈ ಹಿನ್ನಲೆಯಲ್ಲಿ ಎಲ್ಲರಿಗೂ ಶಿಕ್ಷೆ ಒಂದೇ ಸಮಯದಲ್ಲಿ ನೀಡಬೇಕು ಎಂದು ನ್ಯಾಯಾಲಯ ಹೇಳಿತು.