ಹುಬ್ಬಳ್ಳಿ, ಫೆ.05 (Daijiworld News/PY) : "ಸಚಿವ ಸಂಪುಟ ವಿಸ್ತರಣೆಯ ವಿಷಯವಾಗಿ ಸಿಎಂ ಬಿಎಸ್ವೈ ಅವರು ತಂತಿ ಮೇಲೆ ನಡೆಯುವಂತಾಗಿದೆ" ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆಗಾಗಿ ಸಿಎಂ ಬಿಎಸ್ವೈ ಅವರು ತಂತಿ ಮೇಲೆ ನಡೆಯುವಂತಾಗಿದೆ. ಸಚಿವ ಸ್ಥಾನ ಯಾರಿಗೆ ನೀಡಬೇಕು, ಯಾರನ್ನು ಕೈಬಿಡಬೇಕು ಎಂಬುದೇ ತಲೆನೋವಾಗಿದೆ" ಎಂದರು.
"ಸಚಿವರಾಗಬೇಕು ಎನ್ನುವ ಉದ್ದೇಶದಿಂದ ರಾಜಕಾರಣಕ್ಕೆ ಬರುವವರ ಸಂಖ್ಯೆ ಅಧಿಕವಾಗಿದೆ. ಪ್ರಸ್ತುತ ರಾಜಕಾರಣಿಗಳಲ್ಲಿ ನೈತಿಕತೆಯೇ ಇಲ್ಲ" ಎಂದು ಹೇಳಿದರು.
"ಪ್ರಸ್ತುತ ರಾಜಕೀಯದ ಪರಿಸ್ಥಿತಿಯನ್ನು ಗಮನಿಸಿದರೆ ರಾಜಕಾರಣಕ್ಕೆ ಭವಿಷ್ಯವಿಲ್ಲ ಎನ್ನುವಂತಾಗಿದೆ. ಎಲ್ಲರಿಗೂ ಸಚಿವ ಸ್ಥಾನ ಬೇಕು. ಎರಡೆರಡು ಹುದ್ದೆಯೂ ದೊರೆಯಬೇಕು. ಸಚಿವ ಸ್ಥಾನ ದೊರಕದಿದ್ದರೆ ಪಕ್ಷಾಂತರ ಮಾಡುತ್ತಾರೆ ಅಥವಾ ರಾಜೀನಾಮೆ ನೀಡಲು ಮುಂದಾಗುತ್ತಾರೆ. ಇಂಥವರನ್ನು ಸಮಾಧಾನ ಮಾಡುವುದರಲ್ಲೇ ಸಿಎಂ ಬಿಎಸ್ವೈ ಅವರ ಸಮಯ ವ್ಯರ್ಥವಾಗುತ್ತಿದೆ" ಎಂದರು.
"ಜೆಡಿಎಸ್–ಕಾಂಗ್ರೆಸ್, ಜೆಡಿಎಸ್–ಬಿಜೆಪಿ ಸೇರಿ ಸರ್ಕಾರ ನಡೆಸಿದಾಗಲೂ, ಪೂರ್ಣಾವಧಿ ಆಡಳಿತ ನಡೆಸಲು ಆಗಲಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಮುಂದಾದರೆ ಯಾವ ಕ್ಷಣದಲ್ಲಾದರೂ ಸರ್ಕಾರ ಪತನವಾಗಬಹುದು. ಸಂಪೂರ್ಣ ಬಹುಮತ ಪಡೆದುಕೊಂಡ ಪಕ್ಷ ಮಾತ್ರ ಆಡಳಿತ ನಡೆಸಬೇಕು" ಎಂದು ಹೇಳಿದರು.