ಬೆಂಗಳೂರು, ಫೆ.05 (Daijiworld News/PY) : ನಿತ್ಯಾನಂದ ಸ್ವಾಮಿಯ ಜಾಮೀನು ರದ್ದುಪಡಿಸಬೇಕು ಎಂದು ದೂರುದಾರ ಲೆನಿನ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದ ಹಿನ್ನೆಲೆ ಇದೀಗ ಲೆನಿನ್ ಪರ ವಕೀಲರ ಮನವಿಯನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ನಿತ್ಯಾನಂದನ ಜಮೀನು ರದ್ದುಗೊಳಿಸಿದೆ.
ಫೆ.3 ಸೋಮವಾರದಂದು ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಹಾಗಾಗಿ ನ್ಯಾಯಲಯ ನೀಡಿದ ನೋಟಿಸ್ ಸ್ವಾಮೀಜಿಗೆ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪೊಲೀಸರು ಹೈಕೋರ್ಟ್ಗೆ ತಿಳಿಸಿದ್ದು, ನಿತ್ಯಾನಂದನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಕ್ಕಿರುವ ಜಾಮೀನು ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ಗೆ ಪೊಲೀಸರು ಹೀಗೆ ಅಫಿಡವಿಟ್ ಸಲ್ಲಿಸಿದ್ದರು.
ಕೋರ್ಟ್ ನೀಡಿದ ನೋಟಿಸ್ ನಿತ್ಯಾನಂದ ಸ್ವಾಮೀಜಿಗೆ ನೀಡಲು ಆಗುತ್ತಿಲ್ಲ. ಆದರೆ, ನಾವು ನೋಟಿಸ್ ಅನ್ನು ತನ್ನ ಸಹವರ್ತಿ ಕುಮಾರಿ ಅರ್ಚನಾನಂದರಿಗೆ ನೀಡಿದ್ದೇವೆ. ಸದ್ಯ ನಿತ್ಯಾನಂದ ಸ್ವಾಮೀಜಿ ಬಿಡದಿ ಆಶ್ರಮದಲ್ಲಿಲ್ಲ. ಅವರು ಆಧ್ಯಾತ್ಮ ಪ್ರವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕುಮಾರಿ ಅರ್ಚನಾನಂದರಿಗೆ ಈ ನೋಟಿಸ್ ನೀಡಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲರಾಜ್ ಬಿ. ಹೈಕೋರ್ಟ್ಗೆ ನೀಡಿದ ವರದಿಯಲ್ಲಿ ತಿಳಿಸಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು, ಇದೇ ಮೊದಲ ಬಾರಿಗೆ ನೀವು ಕೋರ್ಟ್ ನೋಟಿಸ್ ಅನ್ನು ತಲುಪಿಸುತ್ತಿರುವುದಾ. ಈ ರೀತಿಯ ಕಾರಣ ನೀಡಲು ನಿಮಗೆ ನಾಚಿಕೆಯಾಗುವುದಿಲ್ಲವೇ, ಆಟವಾಡುತ್ತಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನಿಸಿದ್ದರು.
ನಿತ್ಯಾನಂದ ದೇಶದಿಂದ ನಾಪತ್ತೆಯಾಗಿದ್ದಾನೆ ಎಂದು ಈ ಹಿಂದಿನಿಂದಲೂ ಸುದ್ದಿಗಳಾಗಿದ್ದವು. ಆದರೆ ಈ ವಿಚಾರವನ್ನು ತಳ್ಳಿಹಾಕಿದ್ದ ನಿತ್ಯಾನಂದ ಅವರ ಶಿಷ್ಯರು, ನಿತ್ಯಾನಂದ ಸ್ವಾಮಿಗಳು ದೀರ್ಘಕಾಲದ ತಪಸ್ಸಿಗಾಗಿ ಉತ್ತರಭಾರತಕ್ಕೆ ಹೋಗಿದ್ದಾರೆ ಎಂದಿದ್ದರು. ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಗುಜರಾತ್ ಪೊಲೀಸರು, ನಿತ್ಯಾನಂದ ದೇಶ ಬಿಟ್ಟು ಹೋಗಿದ್ದಾನೆ ಎಂದು ತಿಳಿಸಿದ್ದರು.
ಕೆಲವು ದಿನಗಳ ಹಿಂದೆ ನಿತ್ಯಾನಂದ ಆಶ್ರಮದ ಸಿಬ್ಬಂದಿ ವಿರುದ್ದ ನಿತ್ಯಾನಂದನ ಶಿಷ್ಯರೊಬ್ಬರು ಆರೋಪ ಮಾಡಿದ್ದರು. ಆಶ್ರಮದ ಗುರುಕುಲದಲ್ಲಿರುವ ತಮ್ಮ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಆಕೆಯನ್ನು ನೋಡಲೂ ಕೂಡಾ ಅವಕಾಶ ನೀಡುತ್ತಿಲ್ಲ ಎಂದು ಅಹಮದಾಬಾದ್ ಆಶ್ರಮದ ಮುಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕ ಈ ಪ್ರಕರಣ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿತ್ತು.