ಕೋಲಾರ, ಫೆ.05 (Daijiworld News/PY) : "ಹಣಕಾಸು ಇಲಾಖೆ 30 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದ್ದು, ವರ್ಷಕ್ಕೆ 10 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಬುಧವಾರ ತಾಲ್ಲೂಕಿನ ಕೆಂಬೋಡಿ ಹಾಗೂ ವಡಗೂರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, "ಶಿಕ್ಷಕರ ಸ್ನೇಹಿ ವರ್ಗಾವಣೆ ಕಾಯ್ದೆ ಜಾರಿಯ ವಿಚಾರವಾಗಿ ಚಿಂತಿಸಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆಗೆ ಅನುಮೋದನೆ ದೊರೆಯಲಿದೆ. ಶಿಕ್ಷಕರ ವರ್ಗಾವಣೆ ನೀತಿ ಜಟಿಲವಾಗಿದೆ. ಕಡ್ಡಾಯ ವರ್ಗಾವಣೆ ಹೆಸರಿನಲ್ಲಿ ಶಿಕ್ಷಕರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ" ಎಂದು ತಿಳಿಸಿದರು.
"ನಿವೃತ್ತಿಯ 2 ವರ್ಷಗಳ ಮೊದಲು ವರ್ಗಾವಣೆ ಮಾಡುವುದಿಲ್ಲ. ವಲಯ ಹಂತದ ವರ್ಗಾವಣೆ ಮಾಡದೇ, ಜಿಲ್ಲೆ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಈಗಾಗಲೇ ಇಲಾಖೆಯಲ್ಲಿ ಶೇ.60ರಷ್ಟು ಮಹಿಳಾ ಶಿಕ್ಷಕರಿದ್ದಾರೆ. ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ದಂಧೆಯಾಗಿದ್ದು, ಇದರಲ್ಲಿ ಪ್ರಭಾವಿಗಳ ಕೈವಾಡವಿದೆ. ವರ್ಗಾವಣೆ ಸ್ಥಳವನ್ನು ಬ್ಲಾಕ್ ಮಾಡಿಸುತ್ತಿದ್ದು, ಧ್ವನಿ ಇಲ್ಲದವರಿಗೆ ಇದರಿಂದ ತೊಂದರೆಯಾಗುತ್ತಿದೆ. ಈ ವಿಚಾರವಾಗಿ ಹಲವಾರು ದೂರುಗಳು ಬಂದಿವೆ" ಎಂದರು.
"ಇಡೀ ವರ್ಷ ವರ್ಗಾವಣೆ ಮಾಡುವುದಿಲ್ಲ. ಮೇ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಎಲ್ಲಾ ಶಿಕ್ಷಕರು ಜೂನ್ನಿಂದಲೇ ಶಾಲೆಗೆ ಹೋಗಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ" ಎಂದು ತಿಳಿಸಿದರು.
ಬಳಿಕ ಅಕ್ಷರದಾಸೋಹ ವಿಚಾರವಾಗಿ ಮಾತನಾಡಿದ ಅವರು, "ಕೋಲಾರ ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ಸಿರಿಧಾನ್ಯಗಳ ಊಟ ನೀಡಲಾಗುತ್ತಿದೆ. ಸಿರಿಧಾನ್ಯಗಳ ಬಳಕೆಯು ಆರೋಗ್ಯಕ್ಕೆ ಒಳ್ಳೆಯದು. ಈ ಯೋಜನೆಯ ಸಾಧಕಬಾಧಕಗಳ ವಿಚಾರವಾಗಿ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು" ಎಂದು ಹೇಳಿದರು.