ಬಿಹಾರ, ಫೆ.05 (Daijiworld News/PY) : ಸಿಪಿಐ ನಾಯಕ ಕನ್ಹಯಾ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಬುಧವಾರ ಕಲ್ಲು ತೂರಾಟ ನಡೆಸಿದ್ದಾರೆ.
ಬುಧವಾರ ಮಧ್ಯಾಹ್ನ ಚಾಪ್ರಾ–ಸಿವಾನ್ ಮುಖ್ಯರಸ್ಥೆಯ ಕೋಪಾ ಬಜಾರ್ ಬಳಿ ಪ್ರಯಾಣಿಸುತ್ತಿದ್ದ ವೇಳೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದು ಘಟನೆಯಲ್ಲಿ ಕನ್ಹಯಾ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಕನ್ಹಯಾ ಕುಮಾರ್ ಅವರ ಬೆಂಗಾವಲು ವಾಹನಕ್ಕೆ ಹಾನಿಯಾಗಿದೆ.
20–25 ಜನರಿದ್ದ ದುಷ್ಕರ್ಮಿಗಳ ತಂಡವೊಂದು ಕಲ್ಲು ತೂರಿದ್ದು, ಬಳಿಕ ಎಲ್ಲರೂ ಪರಾರಿಯಾಗಿದ್ದಾರೆ. ಕಲ್ಲು ತೂರಿದವರನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ ಎಂದು ಕೋಪಾ ಪೊಲೀಸ್ ಠಾಣೆ ಅಧಿಕಾರಿ ಶಿವನಾಥ್ ರಾಮ್ ತಿಳಿಸಿದ್ದಾರೆ.
ಸಿವಾನ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಜನ ಗಣ ಮನ ಯಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕನ್ಹಯ್ಯಾ ಕುಮಾರ್ ಅವರು ಚಾಪ್ರಾದಿಂದ ಕಾರಿನಲ್ಲಿ ತೆರಳುತ್ತಿರುವ ಸಂದರ್ಭ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಕನ್ಹಯ್ಯಾ ಬೆಂಬಲಿಗರು ಅವರ ಸುರಕ್ಷತೆಗಾಗಿ ಕಾರಿನಲ್ಲಿ ಕೋಪಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.