ಬೆಂಗಳೂರು, ಫೆ 5 (DaijiworldNews/SM): ಮೈತ್ರಿ ಸರಕಾರ ಪತನಗೊಂಡ ಬೆನ್ನಲ್ಲೇ ಬಿಎಸ್ ವೈ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಅಂದಿನಿಂದ ಇಂದಿನ ತನಕ ಸುಮಾರು ಆರು ತಿಂಗಳ ಕಾಲ ರಾಜ್ಯ ಸರಕಾರಕ್ಕೆ ತಲೆ ನೋವಾಗಿರುವ ವಿಚಾರ ಸಂಪುಟ ವಿಸ್ತರಣೆ. ಇದೀಗ ಇದಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗಿದೆ. ಗುರುವಾರದಂದು ಸಂಪುಟ ಸರ್ಜರಿ ನಡೆಯಲಿದೆ.
ಇತ್ತೀಚೆಗೆ ವಿಧಾನಸಭಾ ಚುನಾವಣೆ ಉಪಸಮರದಲ್ಲಿ ಗೆದ್ದಿರುವ ಹತ್ತು ಮತ್ತು ಮೂಲ ಬಿಜೆಪಿಯ ಇಬ್ಬರು ಅಥವಾ ಮೂವರು ಸಚಿವರಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಸೇರಿ ಹಲ ಪ್ರಮುಖರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಸಿ.ಪಿ ಯೋಗೇಶ್ವರ್ ಸಂಪುಟಕ್ಕೆ ಸೇರುವುದು ಮಾತ್ರ ಡೌಟ್ ಎನ್ನಲಾಗಿದೆ. ಈ ನಡುವೆ ಯೋಗೇಶ್ವರ್ ಸೇರ್ಪಡೆಗೆ ಮೂಲ ಬಿಜೆಪಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಅವರನ್ನು ಕೈಬಿಡುವ ಸಾಧ್ಯತೆಯನ್ನೂ ಕೂಡ ವ್ಯಕ್ತಪಡಿಸಲಾಗಿದೆ.
ನೂತನ ಸಚಿವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಆದರೆ, ಯಾರೆಲ್ಲ ಸಚಿವರಾಗಲಿದ್ದಾರೆ ಎಂಬುವುದನ್ನು ಇನ್ನೂ ಕೂಡ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅಂತಿಮ ಹಂತದಲ್ಲಿ ಹಲವು ರೀತಿಯ ಬದಲಾವಣೆಗಳಾದರೂ ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಸಂಪುಟ ವಿಸ್ತರಣೆಯತ್ತ ನೆಟ್ಟಿದೆ.