ಕಲ್ಬುರ್ಗಿ, ಫೆ 06 (Daijiworld News/MB) : ಸರ್ಕಾರವು ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವುದನ್ನು ಖಾತರಿ ಮಾಡಲು ಹಾಗೂ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಬದ್ಧವಾಗಿದೆ. ಆದರೆ ಸಮುದಾಯದ ಬೆಂಬಲವೇ ಇಲ್ಲದೆ ಸರ್ಕಾರಿ ಶಾಲೆಗಳನ್ನು ಉಳಿಸುವುದು ಕಷ್ಟ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, "ಕನ್ನಡ ಶಾಲೆಯ ಉನ್ನತಿಯು ಪೋಷಕರು ತಮ್ಮಕ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿದಾಗ ಆಗುತ್ತದೆ. ಆ ಮೂಳಕ ಮಕ್ಕಳ ಉನ್ನತಿಯೂ ಆಗುತ್ತದೆ ಎಂದರು.
ಮಹಾರಾಷ್ಟ್ರದ ಗಡಿ ವಿಚಾರದಲ್ಲಿ ಮಾತನಾಡಿ, ಕರ್ನಾಟಕದ ನೆಲ–ಜಲ–ಅಸ್ಮಿತೆಯ ವಿಚಾರದಲ್ಲಿ ನಾವು ಯಾವುದೇ ರಾಜಿಗೆ ಸಿದ್ಧರಿಲ್ಲ, ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ಮತ್ತೆ ಗಡಿ ವಿಚಾರಕ್ಕೆ ತಲೆ ಹಾಕಿದೆ. ರಾಜಿಕೀಯ ಕಾರಣಕ್ಕೆ ಗೊಂದಲ ಸೃಷ್ಟಿ ಮಾಡುವ ಯತ್ನ ನಡೆಸುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಈ ವಿವಾದವಿದ್ದು ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಕಾರ್ಯತಂತ್ರವನ್ನು ನಮ್ಮ ಸರ್ಕಾರ ರೂಪಿಸಲಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಬೆಳೆಯುವುದಾರೊಂದಿಗೂ ಆಡುಭಾಷೆಯಾಗಿಯೂ ಕನ್ನಡ ಬೆಳೆಯಬೇಕು. ಇತರ ಭಾಷೆಗಳು ನಮ್ಮ ಯೋಚನೆಯನ್ನು ವಿಸ್ತಾರ ಮಾಡಲಿ, ಆದರೆ ನಮ್ಮ ಆಲೋಚನೆ ಕನ್ನಡದಲ್ಲಿಯೇ ಇರಲಿ ಎಂದು ಕಿವಿ ಮಾತು ಹೇಳಿದ್ದಾರೆ.
ಕನ್ನಡರಿಗೆ ಖಾಸಗಿ ವಲಯದ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ಭರ್ತಿಯಲ್ಲಿ ಆದ್ಯತೆ ನೀಡಬೇಕು ಎಂಬ ಆದೇಶ ಹೊರಡಿಸುವ ಮೂಲಕ ಕನ್ನಡವನ್ನು ಉದ್ಯೋಗ ಭಾಷೆಯನ್ನಾಗಿಸುವಲ್ಲಿ ಸರ್ಕಾರ ಹೆಜ್ಜೆ ಮುಂದಿಟ್ಟಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಸಾಂಸ್ಕೃತಿಕ ವೈವಿಧ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ "ಕಲ್ಯಾಣ ಕರ್ನಾಟಕ ಉತ್ಸವ" ಆಯೋಜಿಸುವ ಚಿಂತನೆ ಸರ್ಕಾರ ನಡೆಸಿದೆ. ಈ ಭಾಗದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಾಗ ವಸತಿಗಾಗಿ ಅಲೆದಾಡುವುದನ್ನು ತಪ್ಪಿಸಲು ನಾಗರಬಾವಿಯ ಬಳಿ 500 ಕೊಠಡಿಗಳುಳ್ಳ ವಸತಿ ನಿಲಯನ್ನು ನಿರ್ಮಿಸಲಾಗುತ್ತಿದೆ. ಅದಕ್ಕಾಗಿ 3 ಎಕರೆ ಜಾಗವನ್ನೂ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.