ನವದೆಹಲಿ, ಫೆ.06 (Daijiworld News/PY) : "ನಾವು ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ಮೊಘಲ್ ಆಡಳಿತ ಬರುತ್ತದೆ ಅದಕ್ಕೆ ಹೆಚ್ಚು ಸಮಯಬೇಕಾಗಿಲ್ಲ" ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ನಿರ್ಣಯ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಅವರು, "ದೇಶದಲ್ಲಿ ಹೆಚ್ಚಾದ ಸಮುದಾಯಗಳು ಎಚ್ಚರವಹಿಸದಿದ್ದಲ್ಲಿ ಮೊಘಲ್ ಆಡಳಿತ ಮರುಕಳಿಸುತ್ತದೆ ಅದಕ್ಕೆ ಹೆಚ್ಚಿನ ಸಮಯ ಬೇಕಾಗಿಲ್ಲ" ಎಂದರು.
"ದಶಕಗಳ ಹಿಂದೆ ಸಮಸ್ಯೆಯಾಗಿ ಉಳಿದಿದ್ದ ಹಲವಾರು ವಿಚಾರಗಳನ್ನು ಪ್ರಧಾನಿ ಮೋದಿ ಪರಿಹರಿಸಿದ್ದಾರೆ. ಭಾರತ ವಿಭಜನೆಯಾದ ಬಳಿಕ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಎನ್ಡಿಎ ಸರ್ಕಾರ ಸಿಎಎ ಅನ್ನು ಜಾರಿಗೆ ತಂದಿದೆ. ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳು ಮಾಡಿದ್ದ ಗಾಯಗಳನ್ನು ಗುಣಪಡಿಸದೆ ನವ ಭಾರತ ನಿರ್ಮಾಣ ಸಾಧ್ಯವಿಲ್ಲ ಹಾಗೂ ತಕ್ಷಣವೇ ಸುಧಾರಣೆ ಮಾಡಲಾಗದು, ಅದಕ್ಕೆ ಸಮಯ ಬೇಕಾಗಿದೆ" ಎಂದರು.
"ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನಗಳಲ್ಲಿ ಹಿಂಸೆ, ಕಿರುಕುಳ ಅನುಭವಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಿಎಎ ಜಾರಿಗೆ ತರಲಾಗಿದ್ದು, ಈ ದೇಶದ ನಾಗರಿಕರ ಪೌರತ್ವ ಕಿತ್ತುಕೊಳ್ಳುವುದಕ್ಕಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ರದ್ದತಿ, ರಾಮ ಮಂದಿರ ನಿರ್ಮಾಣ, ಬೊಡೊ ಸಮಸ್ಯೆ, ತ್ರಿವಳಿ ತಲಾಖ್ ನಿಷೇಧ ಇಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಈ ಎಲ್ಲಾ ವಿಚಾರಗಳು ದಶಕಗಳ ಹಿಂದೆ ಸಮಸ್ಯೆಯಾಗಿಯೇ ಉಳಿದಿತ್ತು" ಎಂದು ತಿಳಿಸಿದರು.
ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್ ಸದಸ್ಯ ಕೆ ಸುಧಾಕರನ್ ಅವರು, "ದೇಶದಲ್ಲಿ ಆರ್ಥಿಕ ಸ್ಥಿತಿ ದುಸ್ಥಿತಿಗೆ ತಲುಪಿರುವಾಗ, ನಿರುದ್ಯೋಗ ಸಮಸ್ಯೆ ತೀವ್ರವಾಗಿರುವ ಸಂದರ್ಭ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ 2024ರ ವೇಳೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ವಿಚಾರವನ್ನು ಪ್ರಸ್ತಾಪಿಸಿರುವುದು ಎಷ್ಟು ಸರಿ" ಎಂದು ಕೇಳಿದರು.
"ದೇಶದ ಆರ್ಥಿಕ ಮೂಲಭೂತ ಸ್ಥಿತಿ ಪ್ರಬಲವಾಗಿದೆ ಎಂದು ಸರ್ಕಾರ ಹೇಳುತ್ತದೆ. ಅಮೆರಿಕಾದಲ್ಲಿ ಬ್ಯಾಂಕ್ ಹೂಡಿಕೆದಾರ ಲೆಹ್ಮಾನ್ ಬ್ರದರ್ಸ್ ಅವರ ಉದ್ಯಮ ಕುಸಿಯುವ ಮುನ್ನ ಅಲ್ಲಿನ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಕೂಡ ಇದೇ ರೀತಿಯಾಗಿ ಹೇಳಿದ್ದರು. ಅಲ್ಲಿ ತೀವ್ರ ಕುಸಿತ ಕಾಣುವ ಮುನ್ನ ಜಾರ್ಜ್ ಬುಷ್ ಕೂಡಾ ಆರ್ಥಿಕ ಮೂಲಭೂತ ಪ್ರಬಲವಾಗಿದೆ ಎಂದು ಹೇಳಿದ್ದರು. ಇದನ್ನು ಒಪ್ಪಬಹುದೇ" ಎಂದು ಕೇಳಿದರು.