ಹೈದರಾಬಾದ್, ಫೆ.06 (Daijiworld News/PY) : "ಕೇಂದ್ರ ಸರ್ಕಾರ ಹೋರಾಟಗಾರರ ಮೇಲೆ ಗುಂಡು ಹಾರಿಸಬಹುದು. ಅವರು ಶಾಹೀನಾಬಾಗ್ ಅನ್ನು ಇನ್ನೊಂದು ಜಲಿಯನ್ ವಾಲಾಬಾಗ್ ಆಗಿ ಪರಿವರ್ತಿಸಬಹುದು. ಬಿಜೆಪಿ ಸಚಿವರೇ ಗುಂಡು ಹಾರಿಸಿ" ಎಂದು ಎಐಎಂಐಎಂ ಪಕ್ಷದ ನಾಯಕ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಸಿಎಎ ವಿರೋಧಿಸಿ ರಾಷ್ಟ್ರರಾಜಧಾನಿ ದೆಹಲಿಯ ಶಾಹೀನಾಬಾಗ್ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯು 50 ದಿನಗಳನ್ನು ಪೂರೈಸಿದ್ದು, ಈ ಮಧ್ಯೆ ಶಾಹೀನಾಬಾಗ್ ಹೋರಾಟವನ್ನು ಹತ್ತಿಕ್ಕಲು ಸದ್ಯದಲ್ಲೇ ಕೇಂದ್ರ ಸರ್ಕಾರ ಬಲಪ್ರಯೋಗ ಮಾಡಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಹೋರಾಟಗಾರರ ಮೇಲೆ ಗುಂಡು ಹಾರಿಸಬಹುದು. ಅವರು ಶಾಹೀನಾಬಾಗ್ ಅನ್ನು ಇನ್ನೊಂದು ಜಲಿಯನ್ ವಾಲಾಬಾಗ್ ಆಗಿ ಪರಿವರ್ತಿಸಬಹುದು. ಬಿಜೆಪಿ ಸಚಿವರೇ ಗುಂಡು ಹಾರಿಸಿ. ಕೇಂದ್ರ ಸರ್ಕಾರ ಇದಕ್ಕೆಲ್ಲಾ ಸರಿಯಾದ ಉತ್ತರ ನೀಡಬೇಕು ಎಂದರು.
ದೆಹಲಿಯಲ್ಲಿ ಫೆ.8ರಂದು ಮತದಾನ ನಡೆಯಲಿದ್ದು, ಮತದಾನದ ದಿನದಂದು ಶಾಹೀನಾಬಾಗ್ನಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನು ಹತ್ತಿಕ್ಕುವ ಸಾಧ್ಯತೆಗಳಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಹೇಳಿದ್ದಾರೆ.
"ನಾನೊಬ್ಬ ಇತಿಹಾಸದ ವಿದ್ಯಾರ್ಥಿಯಾಗಿದ್ದು ಇದಕ್ಕೆ ಸೂಕ್ತವಾದ ಉತ್ತರವನ್ನು ಹೀಗೆಂದು ಕಂಡುಕೊಂಡಿದ್ದೇನೆ. ತನ್ನ ಆಡಳಿತದ ಅವಧಿಯಲ್ಲಿ ಹಿಟ್ಲರ್ ಜರ್ಮನಿಯಲ್ಲಿ ಎರಡೆರಡು ಬಾರಿ ನಡೆಸಿದ್ದ ಹಾಗೂ ಆತ ಯಹೂದಿಯರನ್ನು ಗ್ಯಾಸ್ ಚೇಂಬರ್ಗೆ ತಳ್ಳಿದ್ದ. ಹೀಗಾಗಿ ನನ್ನ ದೇಶವನ್ನು ಇನ್ನೊಂದು ಜರ್ಮನಿಯಾಗಲು ನಾನು ಅವಕಾಶ ಮಾಡಿಕೊಡುವುದಿಲ್ಲ. ಸರ್ಕಾರವು ಎನ್ಪಿಆರ್ಗಾಗಿ ಸುಮಾರು 3,900 ಕೋಟಿ ರೂಪಾಯಿಗಳನ್ನು ಯಾಕೆ ವ್ಯಯಿಸುತ್ತಿದೆ.ದೇಶದಲ್ಲಿ 2024ರವರೆಗೆ ಎನ್ಆರ್ಸಿ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು" ಎಂದು ಹೇಳಿದರು.