ಮಡಿಕೇರಿ, ಫೆ.06 (Daijiworld News/PY): "ಮನೆಯಲ್ಲಿ ಮಗಳ ಮದುವೆ ಕಾರ್ಯಕ್ರಮವಿದೆ. ಹಾಗಾಗಿ ಅದರ ತಯಾರಿಯಲ್ಲಿದ್ದೇನೆ. ಆದ್ದರಿಂದ ಬೆಂಗಳೂರಿಗೆ ಹೋಗಲು ಸಾಧ್ಯವಿಲ್ಲ" ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
"ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ನಮ್ಮ ನಾಯಕರು ಸಂಪುಟ ವಿಸ್ತರಣೆಯನ್ನು ಸಮರ್ಥವಾಗಿ ನಡೆಸಲಿದ್ದಾರೆ. ಮೂಲ ಬಿಜೆಪಿಗರು ಹಾಗೂ ವಲಸಿಗರು ಎನ್ನುವ ಹೋಲಿಕೆಯಿಲ್ಲ. ಉಪಮುಖ್ಯಮಂತ್ರಿ ಸ್ಥಾನ ದೊರಕದೇ ಇದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸರಿಯಾದ ಸಮಯದಲ್ಲಿ ಪಕ್ಷವು ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲಿದೆ" ಎಂದು ತಿಳಿಸಿದರು.
ಈ ಸಂದರ್ಭ ಕೊರೋನಾ ವೈರಸ್ ವಿಚಾರವಾಗಿ ಮಾತನಾಡಿದ ಅವರು, "ದೇಶದಲ್ಲಿ ಕೊರೋನಾ ವೈರಸ್ ಭೀತಿ ಹುಟ್ಟಿಸುತ್ತಿದೆ. ರಾಜ್ಯದ 74 ಜನರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಎಲ್ಲವೂ ನೆಗೆಟಿವ್ ಆಗಿ ಬಂದಿದೆ. ಇದರಿಂದ ಆತಂಕ ಪಡುವ ಅವಶ್ಯಕತೆಯಿಲ್ಲ. ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ" ಎಂದರು.