ಮೈಸೂರು, ಫೆ.06 (Daijiworld News/PY) : "ಬಿಎಸ್ವೈ ಸರ್ಕಾರದ ಬಗ್ಗೆ ಭವಿಷ್ಯ ಹೇಳಲು ನಾನು ಕೋಡಿ ಮಠದ ಸ್ವಾಮೀಜಿಯಲ್ಲ" ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಮೈಸೂರಿನ ಸುತ್ತೂರು ಮಠದಲ್ಲಿ ಮಾತಾಡಿದ ಎಚ್.ಡಿ ಕುಮಾರಸ್ವಾಮಿ ಅವರು, "ಸಿಎಂ ಬಿಎಸ್ವೈ ಅವರ ಸರ್ಕಾರವನ್ನು ಹೇಗೆ ಬೀಳಿಸಬೇಕು ಹಾಗೂ ಹೇಗೆ ಉಳಿಸಬೇಕು ಎಂಬುದು ಅವರಿಗೆ ಕರಗತವಾಗಿದೆ. ಹಾಗಾಗಿ ಯಡಿಯೂರಪ್ಪ ಅವರು ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ನನಗೆ ಇದೆ. ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂದು ಹೇಳಲು ನಾನು ಭವಿಷ್ಯಕಾರನಲ್ಲ" ಎಂದರು.
"ಹಲವು ದಿನಗಳ ಬಳಿಕ ಸುತ್ತೂರು ಮಠಕ್ಕೆ ಆಗಮಿಸಿದ್ದು, ಕೋಡಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಈ ವಿಚಾರವಾಗಿ ಯಾವುದೇ ಅರ್ಥವನ್ನು ಹೇಳುವ ಅವಶ್ಯಕತೆಯಿಲ್ಲ. ನಿಖಿಲ್ ಮದುವೆಗೆ ಆಹ್ವಾನಿಸಲು ಬಂದಿಲ್ಲ. ಆಶೀರ್ವಾದ ಪಡೆಯಲು ಬಂದಿದ್ದೇನೆ. ನಿಖಿಲ್ ಮದುವೆಗೆ ಆಹ್ವಾನಿಸಲು ಮಗ ಹಾಗೂ ಹೆಂಡತಿಯೊಂದಿಗೆ ಬರುತ್ತೇನೆ" ಎಂದು ತಿಳಿಸಿದರು.
"ಯಾವುದೇ ತೊಂದರೆಯಿಲ್ಲದೇ ಸರ್ಕಾರ ನಡೆಯುವ ವಿಚಾರವಾಗಿ ಬಿಎಸ್ವೈ ಅವರನ್ನು ಕೇಳಬೇಕು ಇದರ ಬದಲಾಗಿ ನನ್ನನ್ನು ಕೇಳುವುದರಿಂದ ಯಾವುದೇ ಉಪಯೋವಿಲ್ಲ. ಪ್ರಸ್ತುತ ಸರ್ಕಾರದ ಪರಿಸ್ಥಿತಿಯನ್ನು ಗಮನಿಸಿದರೆ ಜನಾಭಿಪ್ರಾಯಕ್ಕೆ ಸರಿಹೊಂದುವುದಿಲ್ಲ ಎಂದೆಸುತ್ತಿದೆ. ಬಿಜೆಪಿ ಹೈಕಮಾಂಡ್ಗೆ ಈ ಸರ್ಕಾರದ ಮೇಲೆ ಒಲವಿಲ್ಲ. ಯಾರದೋ ಹಂಗಿಗೊಳಗಾದ ಸರ್ಕಾರ ಇದಾಗಿದೆ" ಎಂದು ಹೇಳಿದರು.
"ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿ ಉತ್ತಮ ಸಾಧನೆ ಮಾಡಿದ್ಧಾರೆ. ಇದೀಗ ಸಮ್ಮಿಶ್ರ ಸರ್ಕಾರದ ಬಗ್ಗೆ ಎಚ್. ವಿಶ್ವನಾಥ್ ಪುಸ್ತಕ ಬರೆಯಲಿದ್ದಾರಂತೆ. ಯಾರನ್ನು ಪ್ರೇರೇಪಿಸುವ ಸಲುವಾಗಿ ಪುಸ್ತಕ ಬರೆಯುತ್ತಿದ್ದಾರೋ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಜನಗಳೇ ಚರಿತ್ರೆ ಬರೆಯುತ್ತಾರೆ. ಮಾಜಿ ಸಚಿವ ಎಚ್. ವಿಶ್ವನಾಥ್ ಬಗ್ಗೆ ಚರ್ಚೆ ಮಾಡುವ ಅಗತ್ಯ ನನಗಿಲ್ಲ. ಮೈತ್ರಿ ಸರ್ಕಾರ ಪತನ ಮಾಡುವ ಸಲುವಾಗಿಯೇ ಬಿಜೆಪಿಗೆ ಹೋದೆವು ಎಂದು ಅವರೇ ಹೇಳಿದ್ದಾರೆ" ಎಂದರು.
"ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ಸಂದರ್ಭದಲ್ಲಾದರೂ ಸರ್ಕಾರದಲ್ಲಿ ಅನಾಹುತಗಳು ಸಂಭವಿಸಬಹುದು. ಇದರಿಂದ ಮುಂದೆ ಯಾವಾಗ ಚುನಾವಣೆ ಬಂದರೂ ಎದುರಿಸಲು ಸಿದ್ದ" ಎಂದು ಹೇಳಿದರು.