ಬೆಂಗಳೂರು, ಫೆ.07 (Daijiworld News/PY) : "ಮುಂದಿನ ಮೂರ್ನಾಲು ವರ್ಷಗಳಲ್ಲಿ ಜನರು ಸಾಲಿನಲ್ಲಿ ನಿಂತು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎನ್ನುವುದು ನಮ್ಮ ಕನಸು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಉದ್ಯಮಿ, ಎನ್ಆರ್ಐ ರೊನಾಲ್ಡೊ ಕಾಲೊಸೊ ಅವರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಬೆಂಗಳೂರು ನಗರ ಜಿಲ್ಲೆಯ ನವರತ್ನ ಅಗ್ರಹಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ವೀಕ್ಷಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ರೊನಾಲ್ಡ್ ಕೊಲಾಸೊ ಅವರು ತಮ್ಮ ದುಡಿಮೆಯಲ್ಲಿನ ಒಂದಿಷ್ಟು ಪರ್ಸೆಂಟೇಜ್ ಹಣವನ್ನು ಸಮಾಜ ಸೇವೆಗೆ ಮೀಸಟ್ಟಿರುವುದು ಶ್ಲಾಘನೀಯ ಕಾರ್ಯ. ಇಂದು "ಪರ್ಸೆಂಟೇಜ್"ಗೆ ಕೈಚಾಚುವ ಕಾಲದಲ್ಲಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ, ಉದಾರ ಮನಸ್ಸಿನಿಂದ ದೇಣಿಗೆ ನೀಡುತ್ತಿರುವುದು ಪ್ರಶಂಸನೀಯ. ನಮ್ಮನ್ನು ಪೋಷಿಸಿ ಬೆಳೆಸಿದ ಸಮಾಜಕ್ಕೆ ವಾಪಸ್ ಕೊಡುಗೆ ನೀಡುವುದು ದೊಡ್ಡತನ’ ಎಂದು ಸುರೇಶ್ ಕುಮಾರ್ ಹೇಳಿದರು.
"ಕೊಲಾಸೊ ಅವರ ಪುತ್ರ ನೈಜಿಲ್ ಅವರು ತಂದೆಯ ಸಮಾಜ ಸೇವೆಯ ಚಟುವಟಿಕೆಗಳಿಗೆ ಬೆನ್ನಲುಬಾಗಿ ನಿಂತಿದ್ದಾರೆ. ಅವರು ಸಹ ನಮ್ಮ ಜೊತೆಗೆ ಬರಲಿ. ಎಲ್ಲ ಭೇದಗಳನ್ನು ಮೀರಿ ಈ ರೀತಿಯ ದೊಡ್ಡ ಕಾರ್ಯವನ್ನು ಮಾಡುತ್ತಿರುವ ಕೊಲಾಸೊ ಅವರಿಗೆ ಅಭಿನಂದನೆಗಳು. ಈ ಶಾಲೆಗೆ ಭೇಟಿ ನೀಡಿದಾಗ ಸಂತೋಷವೂ ಆಗುತ್ತದೆ. ಸಂತೋಷ ಏಕೆಂದರೆ ನಮ್ಮ ಸರ್ಕಾರಿ ಶಾಲೆಗೆ ಒಂದು ಅತ್ಯುತ್ತಮವಾದ ಸುಂದರ ಕಟ್ಟಡ ದೊರೆತಿದೆ. ಈ ಶಾಲೆಯು ಬೆಂಗಳೂರಿನ ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿದೆ. ಎಲ್ಲವೂ ಅಚ್ಚುಕಟ್ಟಾಗಿದೆ. ಭವಿಷ್ಯದ ಬಗ್ಗೆಯೂ ಯೋಚಿಸಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಇದೊಂದು ಅದ್ಭುತ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೊಂದೆಡೆ, ಸರ್ಕಾರಿ ಶಾಲೆಗಳ ಪರಿಸ್ಥಿತಿಯ ಬಗ್ಗೆ ಯೋಚಿಸಿದಾಗ ಸಂಕಟವೂ ಆಗುತ್ತಿದೆ. ಏಕೆಂದರೆ ಒಂದೇ ಕೊಠಡಿಯಲ್ಲಿ ಐದು ತರಗತಿಗಳು ನಡೆಯುತ್ತಿರುವ ಹಲವು ಸರ್ಕಾರಿ ಶಾಲೆಗಳು ರಾಜ್ಯದಲ್ಲಿವೆ. ಇದಕ್ಕೆ ಏನು ಮಾಡಲಿ ಎನ್ನುವ ಪ್ರಶ್ನೆ ಸದಾ ನನ್ನನ್ನು ಕಾಡುತ್ತಿದೆ. ಕೊಲಾಸೊ ಅಂತವರು ಇಂತಹ ಸಮಸ್ಯೆಯನ್ನು ಪರಿಹರಿಸಲು ನಮ್ಮ ಜತೆ ಕೈಜೋಡಿಸಿದ್ದಾರೆ. ಇಂತವರ ಸಾಮಾಜಿಕ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಈ ದೇಶದ ಆತ್ಮ ಸರ್ಕಾರಿ ಶಾಲೆಗಳಲ್ಲಿದೆ. ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ. ಈ ಶಾಲೆಗಳಲ್ಲೇ ಪ್ರತಿಭೆಗಳಿವೆ. ಈ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕೊಲಾಸೊ ಅವರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕಾಗಿದೆ. ಈ ಶಾಲೆಗಳ ಅಭಿವೃದ್ಧಿಗೆ ಕೊಲಾಸೊ ಅಂತಹ ಉದಾರ ಮನಸ್ಸಿನವರ ಅಗತ್ಯವಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.
ಪ್ರೊ. ರಾಧಾಕೃಷ್ಣ ಅವರು ಮಾತನಾಡಿ, "ಕೊಲಾಸೊ ಅವರ ಸಾಮಾಜಿಕ ಚಟುವಟಿಕೆಗಳಿಗೆ ಬೆನ್ನಲುಬಾಗಿ ನಿಂತಿರುವವರು ಅವರ ಪುತ್ರ ನೈಜಿಲ್. ಶಾಲೆಯ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿದ್ದು ನೈಜಿಲ್. ತಂದೆ ಸೂಚಿಸುವ ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಈ ಸಂದರ್ಭ ರೊನಾಲ್ಡ್ ಕೊಲಾಸೊ ಅವರು ಉಪಸ್ಥಿತರಿದ್ದರು.