ನವದೆಹಲಿ, ಫೆ.07 (Daijiworld News/PY) : ಸಾರ್ವಜನಿಕರಿಗೆ ಅಂತರ್ಜಾಲ ಬಳಕೆಯು ಮೂಲಭೂತ ಹಕ್ಕಲ್ಲ. ಈ ವಿಚಾರದ ತಪ್ಪು ಕಲ್ಪನೆಯನ್ನು ಪರಿಹರಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಪ್ರಶ್ನೋತ್ತರ ಸಂದರ್ಭ ಈ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ, ಅಂತರ್ಜಾಲದಲ್ಲಿ ಹಾಕಲಾಗುವ ಅನಿಸಿಕೆಗಳಿಗೂ ಸಂಬಂಧವಿಲ್ಲ. ಅಂತರ್ಜಾಲ ಬಳಕೆಯ ವಿಚಾರದ ಜೊತೆಗೆ ದೇಶದ ಭದ್ರತೆಯ ವಿಚಾರವೂ ಮುಖ್ಯವಾಗಿದೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಯಾವುದೇ ವಕೀಲನೂ ಅಂತರ್ಜಾಲ ಬಳಕೆಯು ಮೂಲಭೂತ ಹಕ್ಕಾಗಬೇಕು ಎಂದು ವಾದಿಸಿಲ್ಲ ಎಂಬುದಾಗಿ ಸುಪ್ರೀಂ ಕೂಡಾ ತಿಳಿಸಿದೆ. ಸುಪ್ರೀಂ ಇಂಟರ್ನೆಟ್ ಬಳಕೆಯನ್ನು ಮೂಲಭೂತ ಹಕ್ಕು ಎಂದು ಕರೆದಿರುವುದು ಸತ್ಯ ಎಂದಿದ್ದಾರೆ.
ಇಂಟರ್ನೆಟ್ ಅನ್ನು ಜಮ್ಮು – ಕಾಶ್ಮೀರದಂಥ ಸೂಕ್ಷ ಪ್ರದೇಶದಲ್ಲಿ ಪಾಕಿಸ್ತಾನ ಮತ್ತಿತರ ಭಾರತ ವಿರೋಧಿ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುವ ಅವಕಾಶವಿರುವುದರಿಂದ ನಿಯಂತ್ರಣ ಅಗತ್ಯವಾಗಿದೆ ಎಂದು ತಿಳಿಸಿದರು.