ನವದೆಹಲಿ, ಫೆ 7 (Daijiworld News/MSP): ಜೈಷ್–ಎ–ಮೊಹಮದ್ ಉಗ್ರ ಸಂಘಟನೆ ಮತ್ತೆ ಸಕ್ರಿಯವಾಗಿದ್ದು, 27 ಮಂದಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭಾರತದ ವಾಯು ಸೇನೆ ಕಳೆದ ಫೆಬ್ರವರಿಯಲ್ಲಿ ಪಾಕ್ ಮೇಲೆ ನಡೆಸಿದ ವಾಯು ದಾಳಿಗೆ ಪ್ರತೀಕಾರಕ್ಕಾಗಿ ಬಾಲಕೋಟ್ನ ಶಿಬಿರದಲ್ಲಿ ತರಬೇತಿ ನೀಡುತ್ತಿದೆ. ಈ ಉಗ್ರರನ್ನು ಭಾರತದ ಮೇಲೆ ದಾಳಿ ನಡೆಸಲು ಬಳಸಿಕೊಳ್ಳಲಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.
ಭಾರತದ ವಿರುದ್ಧದ ಮುಂದಿನ ದಾಳಿಯ ನೇತೃತ್ವವನ್ನು ಉಗ್ರ ಮೌಲಾನಾ ಮಸೂದ್ ಅಜರ್ ರಕ್ತಸಂಬಂಧಿ ಯೂಸುಫ್ ಅಜರ್ ವಹಿಸಿದ್ದಾನೆ ಎಂಬ ಮಾಹಿತಿ ಪತ್ತೆಯಾಗಿದೆ.
ಭಯೋತ್ಪಾದಕರಾಗಿ ತರಭೇತಿ ಪಡೆಯುತ್ತಿರುವ 27 ರಲ್ಲಿ ಎಂಟು ಮಂದಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದವರು. ಅವರಿಗೆ ಪಾಕಿಸ್ತಾನದ ಪಂಜಾಬ್ನ ಇಬ್ಬರು ಬೋಧಕರು ಮತ್ತು ಅಫ್ಘಾನಿಸ್ತಾನದ ಮೂವರು ಬೋಧಕರು ತರಬೇತಿ ನೀಡುತ್ತಿದ್ದಾರೆ. ತರಭೇತಿ ಬಳಿಕ ಭಯೋತ್ಪಾದಕರು ಭಾರತಕ್ಕೆ ನುಸುಳಲು ಸಿದ್ಧರಾಗುತ್ತಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.