ಮೈಸೂರು, ಫೆ.07 (Daijiworld News/PY) : "ಜನತಂತ್ರ ವ್ಯವಸ್ಥೆಗೆ ಸರ್ಕಾರದಲ್ಲಿ ಅನುಭವ ಪಡೆದಿರುವವರನ್ನು ಬಳಸಿಕೊಳ್ಳಬೇಕು" ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ಗೈರಾದ ಕೆಲವು ನಾಯಕರ ವಿಚಾರವಾಗಿ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ಬಾರದೇ ಇರುವವರನ್ನು ಕೇಳಿ. ಗಂಡ ಹೆಂಡತಿಯ ಜೊತೆಯೇ ಇರಲು ಆಗುವುದಿಲ್ಲ. ಯಾವಾಗಲೂ ತಬ್ಬಿಕೊಂಡಿರಲು ಸಾಧ್ಯವೇ" ಎಂದು ಕೇಳಿದರು.
"ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರದಲ್ಲಿ ಅನುಭವ ಪಡೆದಿರುವವರನ್ನು ಬಳಸಿಕೊಳ್ಳಬೇಕು. ನಾನು ಮಂತ್ರಿ ಪದವಿಯಲ್ಲಿ ಹಲೊಂದಿದ ಅನುಭವವನ್ನು ಉಪಯೋಗಿಸಿಕೊಳ್ಳಿ ಎನ್ನಲು ಸಾಧ್ಯವಿಲ್ಲ. ನನಗಿರುವ ಅನುಭವವನ್ನು ಮಂತ್ರಿಯಾಗಿ ಅಲ್ಲದೇಯೂ ಉಪಯೋಗಿಸಿಕೊಳ್ಳಬಹುದು. ನಿಮಗೆ ಏನು ಅನುಭವವಿದೆ ಎಂದು ಅವರು ಕರೆದು ಕೇಳಿದರೆ ನಾನು ಹೇಳಬಹುದು" ಎಂದು ತಿಳಿಸಿದರು.
"ಜನರಿಂದ ಆದೇಶ ಪಡೆದು ಗೆದ್ದ ಬಳಿಕವೇ ಮಂತ್ರಿಗಳಾಗಿದ್ದಾರೆ. ಎಲ್ಲರೂ ಸಂವಿಧಾನದ ಅನುಸಾರವಾಗಿಯೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ವಿರೋಧ ಪಕ್ಷದ ನಾಯಕರೆಂದು ಪ್ರತಿಯೊಂದು ವಿಷಯಕ್ಕೂ ಟೀಕೆ ಮಾಡುವುದು ಸರಿಯಲ್ಲ. ಈ ರೀತಿಯಾಗಿ ಟೀಕೆ ಮಾಡುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಎಲ್ಲರೂ ಹಣ ನೀಡಿ ಗೆದ್ದು ಬಂದಿದ್ದಾರೆ ಎಂಬುದರ ಅರ್ಥವೇನು. ಹಾಗಾದರೆ ಇವರೂ ಕೂಡ ಹಣ ನೀಡಿಯೇ ಗೆದ್ದು ಬಂದಿದ್ದಾರಾ" ಎಂದು ಸಿದ್ದರಾಮಯ್ಯ ಅವರನ್ನು ವಿಶ್ವನಾಥ್ ಕೇಳಿದ್ದಾರೆ.