ನವದೆಹಲಿ, ಫೆ.07 (Daijiworld News/PY) : ದೆಹಲಿಯ ಶಾಹೀನ್ಬಾಗ್ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನಾಕಾರರ ತೆರವಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯು ಫೆ.10ರಂದು ನಡೆಯಲಿದೆ ಎಂದು ಸುಪ್ರೀಂ ತಿಳಿಸಿದೆ.
ಅರ್ಜಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ, ದೆಹಲಿ ಚುನಾವಣೆ ಮುಗಿದ ಬಳಿಕವೇ ಅರ್ಜಿ ವಿಚಾರಣೆ ಮಾಡಲಾಗುವುದು. ನಮಗೆ ಸಮಸ್ಯೆ ಅರ್ಥವಾಗುತ್ತದೆ. ಎಂದು ತಿಳಿಸಿದೆ.
ಮುಂದಿನ ಭಾನುವಾರ ವಕೀಲ ಅಮಿತ್ ಸಹ್ನಿ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಕೆಎಂ ಜೋಸೆಫ್ ಅವರ ನ್ಯಾಯಪೀಠ ಹೇಳಿದೆ.
ಶಾಹೀನ್ಬಾಗ್ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಸಾರ್ವಜನಿಕರಿಗೆ, ವಾಹನಗಳಿಗೆ ಸಂಚರಿಸಲು ಅಡಚಣೆಯುಂಟಾಗಿದ್ದು, ರಸ್ತೆ ಬಂದ್ ಆಗಿರುವುದರಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಅಧಿಕ ಸಮಯ ಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.