ನವದೆಹಲಿ, ಫೆ.07 (Daijiworld News/PY) : "ನ್ಯಾಯಸಮ್ಮತವಲ್ಲದ ಕಾನೂನನ್ನು ಶಾಂತಿಯುತ ಪ್ರತಿಭಟನೆ ಹಾಗೂ ನಾಗರಿಕ ಅವಿಧೇಯತೆ ಮೂಲಕ ವಿರೋಧಿಸಬೇಕು. ಅದುವೇ ಸತ್ಯಾಗ್ರಹ" ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿ ಬಂಧನದ ಅವಧಿ ವಿಸ್ತರಣೆ ಮಾಡಿದ ಸರ್ಕಾರದ ಕ್ರಮದ ವಿಚಾರವಾಗಿ ಟೀಕಿಸಿದ ಚಿದಂಬರಂ ಅವರು ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನೇತಾರರು ಸೇರಿದಂತೆ ಇನ್ನಿಬ್ಬರು ನಾಯಕರ ಮೇಲೆ ಪಿಎಸ್ಎ ಹೇರಿರುವ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
"ನ್ಯಾಯಸಮ್ಮತವಲ್ಲದ ಕಾನೂನು ಅಂಗೀಕಾರವಾದರೆ ಅಥವಾ ನ್ಯಾಯವಲ್ಲದ ಕಾನೂನಿಗಾಗಿ ಬೇಡಿಕೆ ಬಂದರೆ ಶಾಂತಿಯುತವಾದ ಪ್ರತಿಭಟನೆ ಮಾಡುವುದನ್ನು ಬಿಟ್ಟರೆ ಜನರಲ್ಲಿ ಬೇರೆ ಯಾವ ಆಯ್ಕೆ ಇದೆ. ಯಾವುದೇ ಆರೋಪವಿಲ್ಲದೆ ಬಂಧಿಸುವುದು ಪ್ರಜಾಪ್ರಭುತ್ವದಲ್ಲಿ ಅಸಹನೀಯವಾದ ಕಾರ್ಯವಾಗಿದೆ" ಎಂದರು.
"ಪ್ರತಿಭಟನೆಗಳು ಅರಾಜಕತೆಯತ್ತ ಕೊಂಡೊಯ್ಯುತ್ತವೆ ಎಂಬುದಾಗಿ ಪ್ರಧಾನಿ ಹೇಳುತ್ತಿದ್ದಾರೆ. ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೆಲ್ಸನ್ ಮಂಡೇಲಾ ಅವರ ಪ್ರೇರಣಾತ್ಮಕ ಉದಾಹರಣೆಗಳನ್ನು ಹಾಗೂ ಚರಿತ್ರೆಯನ್ನು ಅವರು ಮರೆತಿದ್ದಾರೆ. ಸಂಸತ್ ಮತ್ತು ವಿಧಾನಸಭೆಯಲ್ಲಿ ಅಂಗೀಕಾರವಾದ ಕಾನೂನನ್ನು ಪಾಲಿಸಬೇಕು" ಎಂದು ಚಿದಂಬರಂ ಹೇಳಿದರು.