ಬಾಗಲಕೋಟೆ, ಫೆ.07 (Daijiworld News/PY) : ಸರ್ಕಾರದಲ್ಲಿ ನೀವು ಸೀರೆ ಉಟ್ಟವರಿಗೆ ಸ್ಥಾನಮಾನ ನೀಡಿದರೆ, ಒರಿಜಿನಲ್ ಪತಿವ್ರತೆಯರು ಎಲ್ಲಿರಬೇಕು ಎಂದು ಸಿಎಂ ಬಿಎಸ್ವೈ ಅವರಿಗೆ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಕೇಳಿದ್ದಾರೆ.
ಶುಕ್ರವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇರುತ್ತದೋ ಯಾವಾಗ ಬೀಳುತ್ತದೆಯೋ, ಯಾವಾಗ ಎಲೆಕ್ಷನ್ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪಟ್ಟ ಮಹಿಷಿಯರಿಗೆ ಅವಕಾಶ ಕೊಡದ ಕಾರಣ ಸರ್ಕಾರದ ಭವಿಷ್ಯ ಅಸ್ಥಿರವಾಗಿದೆ ಎಂದು ಹೇಳಿದರು.
ಸರ್ಕಾರ ಎಲ್ಲೆಂದರಲ್ಲಿ ತೂತು ಬಿದ್ದಿದೆ. ಬಿದ್ದಿರೋ ತೂತುಗಳನ್ನು ಮುಚ್ಚುವುದಲ್ಲ, ಪ್ಯಾಚ್ ಹಾಕುವಂತದ್ದು, ತೂತುಗಳನ್ನು ಮುಚ್ಚುವುದಕ್ಕೆ ಸಾಹೇಬರೆ ಬೇಕೆನಿಸುತ್ತಿದೆ. ಬಿಎಸ್ವೈ ಅವರ ಪರಿಸ್ಥಿತಿ ನೋಡಿದರೆ ನನಗೆ ಅಯ್ಯೋ ಎಂದನಿಸುತ್ತದೆ. ಪಾಪ ಅವರಷ್ಟು ನೋವು ಅನುಭವಿಸುವವರು ಯಾರೂ ಇಲ್ಲ ಎಂದರು.
ಈಗ ಸಿಎಂಗೆ ಬೆಲೆಯಿಲ್ಲ, ದೆಹಲಿಗೆ ಹೋದರೂ ಪ್ರಧಾನಮಂತ್ರಿ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಹಿಂದೆ ಮಂತ್ರಿಗಳೆಂದರೆ ಎದ್ದು ನಿಂತು ಗೌರವ ನೀಡುತ್ತಿದ್ದರು. ಪ್ರಸ್ತುತ ಮಂತ್ರಿ ಮಂಡಲಕ್ಕೆ ಮರ್ಯಾದೆಯೇ ಇಲ್ಲ. ಅದು ಬಸ್ಸ್ಟ್ಯಾಂಡ್ ಬಸವಣ್ಣನ ಜೋಳಿಗೆಯಂತಾಗಿದೆ. ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಗೊತ್ತಿಲ್ಲ. ಬೆಲೆಯೇ ಇಲ್ಲದಂತಾಗಿದೆ ಎಂದು ಹೇಳಿದರು.
ಪ್ರವಾಹದಿಂದಾಗಿ ಉತ್ತರ ಕರ್ನಾಟಕದಲ್ಲಿ ಸುಮಾರು 3 ಲಕ್ಷ ಮನೆ ಬಿದ್ದಿದ್ದವು, ಜನರು ಸಾವನ್ನಪ್ಪಿದರೂ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ದೊರೆತಿಲ್ಲ ಎಂದು ತಿಳಿಸಿದರು.