ಮೈಸೂರು, ಫೆ.07 (Daijiworld News/PY): "ಕಷ್ಟಕಾಲದಲ್ಲಿ ನಾನು ನಿಮ್ಮ ಜೊತೆಯಿರುತ್ತೇನೆ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಎಂದು ಮಾತ್ರವೇ ಬಿಎಸ್ವೈ ಅವರಲ್ಲಿ ಕೇಳಿದ್ದೇನೆ. ಹಿಂದಿನ ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದೆ" ಎಂದು ಕೊಳ್ಳೆಗಾಲದ ಎನ್.ಮಹೇಶ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಷ್ಟಕಾಲದಲ್ಲಿ ನಾನು ನಿಮ್ಮ ಜೊತೆಯಿರುತ್ತೇನೆ. ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಎಂದು ಮಾತ್ರವೇ ಬಿಎಸ್ವೈ ಅವರಲ್ಲಿ ಕೇಳಿದ್ದೇನೆ. ಹಿಂದಿನ ವರ್ಷಗಳಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಈಗಲಾದರೂ ಹೆಚ್ಚಿನ ಅನುದಾನ ನೀಡಿದರೆ ಅದನ್ನು ಬಳಸಿಕೊಂಡು ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇನೆ" ಎಂದು ತಿಳಿಸಿದರು.
"ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲರೂ ಯಾವ ರೀತಿ ಗೆದ್ದು ಬಂದಿದ್ಧಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಆ ವಿಚಾರದ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ. ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸರಿಯಿಲ್ಲ" ಎಂದು ಹೇಳಿದರು.
"ಸಿದ್ದರಾಮಯ್ಯ ಅವರು ಹಿರಿಯರು. ಅವರಿಗೆ ಜನತಾ ನ್ಯಾಯಾಲಯವೇ ಅಂತಿಮ ಎನ್ನುವ ಬಗ್ಗೆ ತಿಳಿದಿದೆ. ಜನತಾ ನ್ಯಾಯಾಲಯದಲ್ಲೇ ಆಯ್ಕೆಯಾದ ಬಳಿಕ ಪುನಃ ಅನರ್ಹರು ಎಂದು ಕರೆಯುವುದು ಸೂಕ್ತವಲ್ಲ" ಎಂದರು.
"ನಾನೀಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಹೀಗೆ ಯಾವುದೇ ಪಕ್ಷದಲ್ಲಿ ಇಲ್ಲ ಸ್ವತಂತ್ರವಾಗಿದ್ದೇನೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರ ಬಗ್ಗೆ ಸಿಎಂ ಬಿಎಸ್ವೈ ಅವರು ಈಗಾಗಲೇ ಶೇ.75ರಷ್ಟು ಮಾತನ್ನು ಈಡೇರಿಸಿದ್ದು, ಉಳಿದ ವಾಗ್ದಾನವನ್ನೂ ಈಡೇರಿಸಲಿದ್ಧಾರೆ" ಎಂದು ಹೇಳಿದರು.