ನವದೆಹಲಿ, ಫೆ7 (Daijiworld News/MSP): ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಹೊಸ ಡೆತ್ ವಾರೆಂಟ್ ನಿಗದಿಗೊಳಿಸುವಂತೆ ಕೋರಿ ತಿಹಾರ್ ಜೈಲಿನ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ದೆಹಲಿ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಕಾನೂನು ಅವರಿಗೆ ಬದುಕುವುದಕ್ಕೆ ಅವಕಾಶ ನೀಡಿದಾಗ ಗಲ್ಲು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ. ಅಪರಾಧಿಗಳಿಗೆ ಒಂದು ವಾರದೊಳಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನಂತೆ ಶುಕ್ರವಾರದೊಳಗೆ ಕಾನೂನು ಪ್ರಕ್ರಿಯೆಗೊಳಿಸಬೇಕು ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ಜಡ್ಜ್ ಧರ್ಮೇಂದ್ರ ರಾಣಾ, ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದರು.
ಈ ಹಿಂದೆ ನಿರ್ಭಯಾ ಪ್ರಕರಣದ ಆತ್ಯಾಚಾರಿಗಳನ್ನು ಗಲ್ಲಿಗೇರಿಸಲು ಹೊಸದಾಗಿ ದಿನಾಂಕ ನಿಗದಿ ಮಾಡುವಂತೆ ಕೋರಿ ತಿಹಾರ್ ಜೈಲು ಅಧಿಕಾರಿಗಳು ದೆಹಲಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ನ್ಯಾಯದ ದೃಷ್ಟಿಯಿಂದ ಹೈಕೋರ್ಟ್ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು, ಅಪರಾಧಿಗಳು ಅಷ್ಟರೊಳಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗಿರುವಾಗ ಈ ರೀತಿ ಮತ್ತೊಮ್ಮೆ ದಿನಾಂಕ ನಿಗದಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವ ಕ್ರಮ ಸರಿಯಲ್ಲ ಎಂದಿತು.
ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದನ್ನು ವಿಚಾರಣಾ ನ್ಯಾಯಾಲಯ ಜನವರಿ 31ರಂದು ತಡೆಹಿಡಿದಿದ್ದು ನಾಲ್ವರು ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್(32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ(26), ಅಕ್ಷಯರ್ ಕುಮಾರ್(31) ತಿಹಾರ್ ಜೈಲಿಗೆ ಕಳುಹಿಸಿದೆ.