ಬೆಂಗಳೂರು, ಫೆ.07 (Daijiworld News/PY) : ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ತಡ ಮಾಡುತ್ತಿರುವುದನ್ನು ಆಕ್ರೋಶ ವ್ಯಕ್ತಪಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಫೆ.13ರಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದು, ರಾಜ್ಯದ ಪ್ರತಿಯೊಬ್ಬರು ಸ್ವಯಂಪ್ರೇರಿತವಾಗಿ ಬಂದ್ಗೆ ಸಹಕಾರ ನೀಡುವಂತೆ ಸಂಘಟನೆಗಳು ಮನವಿ ಮಾಡಿವೆ.
ಸರೋಜಿನಿ ಮಹಿಷಿ ಸಮಿತಿಯ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ಗಮನಕೊಡುತ್ತಿಲ್ಲ. ತಕ್ಷಣವೇ ವರದಿ ಅನುಷ್ಠಾನ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ತಿಳಿಸಿವೆ.
ಕನ್ನಡ ಚಳವಳಿಯ ನಾಗೇಶ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಜಯ ಕರ್ನಾಟಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರ ಸಂಘ, ಸಿಐಟಿಯು ಮೊದಲಾದ ಸಂಘಟನೆಗಳು ಸೇರಿ ಫೆ.13ರ ಬಂದ್ಗೆ ಬೆಂಬಲ ಸೂಚಿಸಿವೆ.
1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವು ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಾಶಸ್ತ್ಯ ಸಿಗಬೇಕೆಂದು ತಿಳಿಸಲು ಮಾಜಿ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ನೇತೃತ್ವದ ಸಮಿತಿ ರಚಿಸಲಾಗಿತ್ತು. ಗೋಪಾಲಕೃಷ್ಣ ಅಡಿಗ ಮೊದಲಾದ 4 ಮಂದಿ ಇದ್ದ ಈ ಸಮಿತಿ 1986ರಲ್ಲಿ ಅಂತಿಮ ವರದಿ ಸಲ್ಲಿಸಿತು. ಒಟ್ಟು 58 ಶಿಫಾರಸುಗಳನ್ನು ಮಾಡಿತು. ಇದರಲ್ಲಿ ರಾಜ್ಯ ಸರ್ಕಾರ 40 ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಉಳಿದ ಹಲವು ಪ್ರಮುಖ ಶಿಫಾರಸುಗಳು ಇನ್ನೂ ಹಾಗೆಯೇ ಉಳಿದಿವೆ.
ಈ ವರದಿ ಖಾಸಗಿ ಕಂಪನಿಗಳಲ್ಲೂ ಮೀಸಲಾತಿ ನಿರ್ದಿಷ್ಟಪಡಿಸಿ ಶಿಫಾರಸುಗಳನ್ನು ಮಾಡಿದೆ. ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡಬೇಕೆಂಬುದು ದಶಕಗಳಿಂದ ಕನ್ನಡ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ. ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ಕೊಡಬೇಕು. ರಾಜ್ಯದಲ್ಲಿ ಬಿಎಸ್ವೈ ಸರ್ಕಾರ ಕನ್ನಡಿಗರಿಗೆ ಶೇ. 75ರಷ್ಟು ಉದ್ಯೋಗ ಮೀಸಲಾತಿ ಕೊಡುವ ಕಾನೂನು ಜಾರಿಗೊಳಿಸುವುದಾಗಿ ಚಿಂತನೆ ನಡೆಸಿದೆ.