ನವದೆಹಲಿ, ಫೆ 08 (Daijiworld News/MB) : ಇಂದು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರೂ ಎಂದು ಜನರು ಇಂದು ನಿರ್ಧಾರ ಮಾಡಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಶೇ 54ರಷ್ಟು ಮತ ಗಳಿಸಿ, ಒಟ್ಟು 70ರಲ್ಲಿ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಆಪ್) ನಿಚ್ಚಳ ಬಹುಮತ ಗಳಿಸುವ ವಿಶ್ವಾಸದಲ್ಲಿದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಈ ಬಾರಿ ರಾಷ್ಟ್ರ ರಾಜಧಾನಿಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಛಲದೊಂದಿಗೆ ಕಣಕ್ಕೆ ಇಳಿದಿದೆ.
ಆದರೆ ಕೇಜ್ರಿವಾಲ್ ಸರ್ಕಾರ ಕೊಟ್ಟ ಭರವಸೆಯಂತೆ ಉಚಿತವಾಗಿ ಮಾಸಿಕ 200 ಯೂನಿಟ್ವರೆಗೆ ವಿದ್ಯುತ್ ಪೂರೈಕೆ, ಕುಡಿಯುವ ನೀರು ಸರಬರಾಜು, ಆರೋಗ್ಯ, ಶಿಕ್ಷಣ ಮತ್ತು ಮಹಿಳೆಯರಿಗೆ ಸಾರಿಗೆ ಸೌಲಭ್ಯ ನೀಡಿದ್ದು ಬಿಜೆಪಿಗೆ ಇದು ಮುಳುವಾಗುವ ಸಾಧ್ಯತೆಗಳಿವೆ.
ಬಿಜೆಪಿಯು ಶಾಹೀನ್ ಬಾಗ್ನಲ್ಲಿ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಮುಂದಾಗಿಸಿ ಹಿಂದೂಗಳ ಮತ ಬೇಟೆಯಲ್ಲಿ ತೊಡಗಿದ್ದು ಆಪ್ ಕಳೆದ ಬಾರಿ ತಾನು ಜಯಗಳಿಸಿದ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿಯು ಈ ಚುನಾವಣೆಯಲ್ಲೂ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನೇ ಮುಂದಾಗಿಟ್ಟು ಚುನಾವಣೆಯಲ್ಲಿ ಸ್ಫರ್ಧೆಗೆ ಇಳಿದಿದೆ.