ನವದೆಹಲಿ, ಫೆ 08 (Daijiworld News/MB) : ಕೊರೋನಾ ವೈರಸ್ ಭೀತಿಯಿಂದಾಗಿ ಡೈಮಂಡ್ ಪ್ರಿಸ್ಸೆಸ್ ಹಡಗು ಜಪಾನ್ನಿಂದ ಏಕಾಏಕಿ ನಿರ್ಬಂಧಿಸಲಾಗಿದ್ದು, ಅದರಲ್ಲಿ ಸಾಕಷ್ಟು ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಹಡಗಿನಲ್ಲಿರುವ ಭಾರತೀಯರಲ್ಲಿ ಯಾರೊಬ್ಬರಿಗೂ ವೈರಸ್ ಸೋಂಕು ಇರುವುದು ದೃಢಪಟ್ಟಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ರಾತ್ರಿ ಜೈಶಂಕರ್ ಅವರು ಟ್ವೀಟ್ ಮಾಡಿದ್ದು ಕೊರೋನಾ ವೈರಸ್ ಕಾರಣದಿಂದಾಗಿ ಜಪಾನ್ನಿಮದ ಹೊರಗೆ ಉಳಿದಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಅನೇಕ ಭಾರತೀಯ ಸಿಬ್ಬಂದಿಗಳೂ ಇದ್ದಾರೆ, ಹಾಗೆಯೇ ಭಾರತೀಯ ಪ್ರಯಾಣಿಕರು ಇದ್ದಾರೆ. ಚಪಾನ್ನಲ್ಲಿರುವ ನಮ್ಮ ರಾಯಭಾರ ಕಚೇರಿ ಇತ್ತೀಚಿಗೆ ನೀಡಿರುವ ಮಾಹಿತಿಯಂತೆ ಹಡಗಿನಲ್ಲಿರುವ ಭಾರತೀಯರ ಪೈಕಿ ಯಾರಿಗೂ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿಲ್ಲ. ಈ ಬೆಳವಣಿಗೆ ಕುರಿತು ನಾವು ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಯೊಕೊಹಾಮಾ ಕರಾವಳಿಯಲ್ಲಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವವರಲ್ಲಿ 61ಕ್ಕೆ ಜನರಿಗೆ ಕೊರೋನಾ ವೈರಸ್ ಸೋಂಕು ತಗಲಿದೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಈ ಹಿಂದೆ ತಿಳಿಸಿತ್ತು. ಆ ಪೈಕಿ ಜಪಾನ್ನ 28, ಅಮೆರಿಕದ 11, ಕೆನಡಾದ 7, ಚೀನಾದ 3 ಹಾಗೂ ಇಂಗ್ಲೆಂಡ್, ನ್ಯೂಜಿಲೆಂಡ್, ತೈವಾನ್, ಅರ್ಜೆಂಟೀನಾ ಮತ್ತು ಫಿಲಿಪೈನ್ಸ್ನ ತಲಾ ಒಬ್ಬರಿಗೆ ಸೋಂಕು ತಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಮೊದಲು ವಿದೇಶಾಂಗ ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದು, ಕೊರೋನಾ ಪೀಡಿತ ಪ್ರದೇಶವಾದ ಚೀನಾದ ವುಹಾನ್ನಲ್ಲಿ ಅಂದಾಜು 80 ಭಾರತೀಯ ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರೆ. ಆ ಪೈಕಿ 70 ಮಂದಿ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಹಇಂದೆ ಬರಲು ಒಪ್ಪಿಲ್ಲ ಎಂದು ತಿಳಿಸಿದ್ದರು.
ಮಿಯಾಮಿ ಮೂಲದ ಕಾರ್ನಿವಲ್ ಒಡೆತನದ ಡೈಮಂಡ್ ಪ್ರಿನ್ಸೆಸ್ನಿಂದ ಹಾಂಗ್ಕಾಂಗ್ನಲ್ಲಿ ಇಳಿದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಸೋಮವಾರ ಯೊಕೊಹಾಮಾಕ್ಕೆ ಆಗಮಿಸಿದ ಹಡಗನ್ನು ಎರಡುವಾರ ಕಾಲ ತಡೆಹಿಡಿಯಲಾಗಿತ್ತು. ಸುಮಾರು 3,700 ಪ್ರಯಾಣಿಕರು ಪ್ರಯಾಣಿಸಬಹುದಾದ ಸಾಮರ್ಥ್ಯದ ಈ ಹಡಗಿನಲ್ಲಿ, 1,100 ಸಿಬ್ಬಂದಿ ಮತ್ತು 2670 ಪ್ರಯಾಣಿಕರು ಇರಬಹುದಾಗಿದೆ.
ಸದ್ಯ ಕೊರೊನಾ ವೈರಸ್ಗೆ ಸುಮಾರು 630ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಚೀನಾದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.