ನವದೆಹಲಿ, ಫೆ 08 (Daijiworld News/MB) : ಗುರುಗ್ರಾಮದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಪತ್ನಿ ಹಾಗೂ ಪುತ್ರನನ್ನು ಗುಂಡಿಕ್ಕಿ ಹತ್ಯೆ ಮಾಡಿದ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಓ) ಮಹಿಪಾಲ್ ಸಿಂಗ್ (32) ಎಂಬಾತನಿಗೆ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಮಹಿಪಾಲ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೃಷ್ಣನ್ಕಾಂತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದು, 2018ರ ಅಕ್ಟೋಬರ್ 13ರಂದು ನ್ಯಾಯಾಧೀಶರ ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಘಟನೆ ನಡೆದ ಸಂದರ್ಭದಲ್ಲಿ ಬೆಂಗಾವಲು ವಾಹನದಲ್ಲಿದ್ದ ಆತನನ್ನು ಭೋಂಡ್ಸಿ ಜೈಲಿನಲ್ಲಿ ಇರಿಸಲಾಗಿತ್ತು.
ಆರೋಪಿಗೆ ಭಾರತೀಯ ದಂಡ ಸಹಿಂತೆ ಸೆಕ್ಷನ್ 302 ರ ಅನ್ವಯ ಮರಣ ದಂಡನೆ, ಸಾಕ್ಷ್ಯ ನಾಶ ಮಾಡಿದ ಹಿನ್ನಲೆಯಲ್ಲಿ ಐಪಿಸಿ ಸೆಕ್ಷನ್ ೨೦೧ರ ಅನ್ವಯ ಐಸು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ಶಸ್ತ್ರಾಸ್ತ್ರ ಕಾಯ್ದೆಯಡಿ ಮೂರು ವರ್ಷ ಜೈಲು ಹಾಗೂ ೫೦೦೦ ರೂಪಾಯಿ ದಂಡ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುಧೀರ್ ಪರ್ಮಾರ್ ತೀರ್ಪು ನೀಡಿದ್ದಾರೆ.
"ವೈಯಕ್ತಿಕ ಭದ್ರತಾ ಅಧಿಕಾರಿಯೇ ಎರಡು ಜೀವಗಳ ಹತ್ಯೆ ಮಾಡಿ ರಕ್ಷಣೆ ನೀಡಬೇಕಾದ ವ್ಯಕ್ತಿಗಳ ಮೇಲೆ ಇರಿಸುವ ವಿಶ್ವಾಸಕ್ಕೆ ಸ್ರೋಹ ಮಾಡಿದ್ದಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸುವ ಪೊಲೀಸ್ ಪಡೆಯನ್ನು ಅವಮಾನ ಮಾಡುವಂಥ ಕೃತ್ಯವಿದು. ರಕ್ಷಕನೇ ಹಂತಕನಾದ ಸಂದರ್ಭದಲ್ಲಿ ಆರೋಪಿಗೆ ಶಿಕ್ಷೆ ನೀಡಲು ಬೇರೆ ಯಾವ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ. ಬಚ್ಚನ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಇದು ವಿರಳಾತಿವಿರಳ ಪ್ರಕರಣದಲ್ಲಿ ಒಂದಾಗಿದೆ" ಎಂದು ತೀರ್ಪಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.