ತಿರುವನಂತಪುರ, ಫೆ 08 (Daijiworld News/MB) : ಕೇರಳದ ಪ್ರಸಕ್ತ ಸಾಲಿನ ಬಜೆಟ್ ಪುಸ್ತಕದ ಮುಖಪುಟದಲ್ಲಿ ಮಹಾತ್ಮ ಗಾಂಧಿ ಹತ್ಯೆಯ ಚಿತ್ರವನ್ನು ಮುದ್ರಣ ಮಾಡಲಾಗಿದ್ದು ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್, "ಬಾಪುವನ್ನು ಹತ್ಯೆ ಮಾಡಿದವರು ಯಾರು ಎಂದು ನಾವು ಮರೆಯುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ಸಾರಲಾಗಿದೆ" ಎಂದು ಹೇಳಿದ್ದಾರೆ.
ಈ ಚಿತ್ರವನ್ನು ಜನಪ್ರಿಯ ಚಿತ್ರ ಕಲಾವಿದ ಟಾಮ್ ವಟ್ಟಕ್ಕುಳಿ ರಚಿಸಿದ್ದು ನಾಥೂರಾಂ ಗೋಡ್ಸೆ ಗಾಂಧೀಜಿಗೆ ಗುಂಡಿಕ್ಕಿದ ಬಳಿಕ ಗಾಂಧಿ ನೆಲದಲ್ಲಿ ಬಿದ್ದು ಅವರ ದೇಹದಿಂದ ರಕ್ತ ಹೊರಬರುತ್ತಿರುವ ಹಾಗೂ ಸುತ್ತಮುತ್ತ ನೆರೆದ ಜನರು ಆತಂಕಕ್ಕೆ ಒಳಗಾಗಿ ಅಳುತ್ತಿರುವ ದೃಶ್ಯವಿದೆ.
ಹಿಂದೂ ಕೋಮುವಾದಿಗಳು ಮಹಾತ್ಮ ಅವರನ್ನು ಹತ್ಯೆ ಮಾಡಿದ್ದಾರೆ. ಜನರು ಇದನ್ನು ಎಂದಿಗೂ ಮರೆಯುವುದಿಲ್ಲ ಎಂಬುದನ್ನು ಸಿಪಿಎಂ ನೇತೃತ್ವದ ಎಲ್ಡಿಎಫ್ ಸರಕಾರ ಸಾಬೀತುಪಡಿಸಲು ಇಚ್ಛಿಸುತ್ತಿದೆ ಎಂದು ಐಸಾಕ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, "ನಾವು ಆರೆಸ್ಸೆಸ್-ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿರುವುದು ಸತ್ಯ, ಆದರೆ ಈ ಚಿತ್ರವನ್ನು ಬಜೆಟ್ನಲ್ಲಿ ಮುದ್ರಿಸುವ ಅಗತ್ಯ ಇರಲಿಲ್ಲ" ಎಂದು ಹೇಳಿದ್ದಾರೆ.
ಹಾಗೆಯೇ ಈ ಬಗ್ಗೆ ಮಾತನಾಡಿದ ಐಯುಎಂಎಲ್ ನಾಯಕ ಎಂಕೆ ಮುನೀರ್ ಅವರು, "ರಾಜಕೀಯ ಉದ್ದೇಶಕ್ಕಾಗಿ ಮಹಾತ್ಮನನ್ನು ಬಳಸಿರುವುದು ಸರಿಯಲ್ಲ" ಎಂದಿದ್ದಾರೆ.