ಧಾರವಾಡ, ಫೆ.08 (Daijiworld News/PY): "ಬಿಜೆಪಿ ಹೈಕಮಾಂಡ್ಗೆ ಯಡಿಯೂರಪ್ಪ ಬೇಡವಾದರೆ ತೆಗೆದುಹಾಕಲಿ, ಆದರೆ ಪಾಪಾ ಅವರನ್ನು ಆಟವಾಡಿಸುವುದು ಬೇಡ" ಎಂದು ಕಾಂಗ್ರೆಸ್ನ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ಧಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, "ಬಿಜೆಪಿ ಹೈಕಮಾಂಡ್ಗೆ ಬಿಎಸ್ವೈ ಬೇಡವಾದರೆ ತಕ್ಷಣವೇ ತೆಗೆದುಹಾಕಲಿ. ನಮ್ಮ ಕಾಂಗ್ರೆಸ್ನಿಂದ ಇನ್ನು ಹತ್ತು ಜನರನ್ನು ತೆಗೆದುಕೊಳ್ಳಿ. ಪಾಪ ಯಡಿಯೂರಪ್ಪ ಅವರನ್ನು ಆಟ ಆಡಿಸುವುದು ಬೇಡ. ನಮ್ಮವರು ರಾಜೀನಾಮೆ ಕೊಡೋದಾದರೆ ಕೊಡಲಿ" ಎಂದರು.
"ಪ್ರಧಾನಿ ಮೋದಿಯವರು ಬಿಎಸ್ವೈ ಅವರಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಆಗಿರುವ ಯಡಿಯೂರಪ್ಪ ಅವರು ಅಮಿತ್ ಶಾ, ಪ್ರಧಾನಿ ಮೋದಿ ಅವರ ಮುಂದೆ ತಗ್ಗಿ, ಬಗ್ಗಿ ನಡೆಯುವುದು ಸರಿಯಲ್ಲ. ಸಿಎಂ ಬಿಎಸ್ವೈ ಅವರಿಗೆ ಅವಮಾನ ಮಾಡಿದರೆ ದೇಶದ ಜನತೆಗೆ ಅವಮಾನ ಮಾಡಿದಂತೆ. ಕುಮಾರಸ್ವಾಮಿ ಕಿಂಗ್ ಆಗುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ ಅವರು ಕಿಂಗ್ ಮೇಕರ್ ಆಗಬೇಕು" ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷಗಿರಿ ಬಗ್ಗೆ ಮಾತನಾಡಿದ ಅವರು, "ಎಐಸಿಸಿ ಈ ವಿಷಯದಲ್ಲಿ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಡಿಕೆಶಿ ಅಧ್ಯಕ್ಷರಾಗುತ್ತಾರೋ ತಿಳಿದಿಲ್ಲ. ಬಿಜೆಪಿಯ ಕೆಲ ಶಾಸಕರೇ ಅಭ್ಯರ್ಥಿ ಹಾಕಿ ಅಂತಾ ಹೇಳಿದ್ದಾರೆ. ಅದಕ್ಕಾಗಿಯೇ ಎಂಎಲ್ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಪವರ್ ಗೇಮ್ನಲ್ಲಿ ಸವದಿ ಸೋಲಬಹುದು" ಎಂದು ತಿಳಿಸಿದರು.
"ಸರ್ಕಾರ ನಮ್ಮ ಭಾವನೆ ವಿರುದ್ಧ ನಡೀತಾ ಇದೆ ಅಂತಾ ಬಿಜೆಪಿಯ ಒಳಗಡೆ ಕೆಲವರಿಗೆ ಅನಿಸಿದೆ. ಅಲ್ಲಿನ ಕೆಲವು ಶಾಸಕರು ಅಭ್ಯರ್ಥಿ ಹಾಕುವಂತೆ ಹೇಳಿರಬೇಕು. ಆ ಪಕ್ಷದಲ್ಲಿ ಕಳವಳ ಇದೆ, ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಅತೃಪ್ತರ ಜೊತೆ ಮಾತನಾಡಿಯೇ ಸ್ಪರ್ಧಿಸಿರಬೇಕು" ಎಂದರು.