ನವದೆಹಲಿ, ಫೆ 08 (Daijiworld News/MB) : ಸಿಎಎ-ಎನ್ಆರ್ಸಿ ವಿರೋಧಿ ಪ್ರತಿಭಟನೆ ಮಾಡಿ ಕಾಗಜ್ ನಹೀಂ ದಿಖಾಯೇಂಗೇ (ನಾವು ದಾಖಲೆಗಳನ್ನು ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದವರಿಗೆ ದೆಹಲಿ ಚುನಾವಣೆಯಲ್ಲಿ ಸೋಲಾಗಲಿದೆ ಎಂದು ಹೇಳಿರುವ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿ ರಾಮ್ಲಾಲ್ ಈಗ ದೆಹಲಿ ಮತದಾರರಲ್ಲಿ ಮತದಾನ ಮಾಡಲು ಹೋಗುವಾಗ ಅಗತ್ಯ ದಾಖಲೆಗಳನ್ನು ತೋರಿಸಿ ಎಂದು ಹೇಳಿದ್ದಾರೆ.
ನಿರ್ಮಾಣ್ ಭವನ್ ಬೂತ್ನಲ್ಲಿ ಮತಹಾಕಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, "ಇಂದು ಮತದಾನ ಮಾಡುವಾಗ ತಪ್ಪದೇ ದಾಖಲೆಗಳನ್ನು ಕೊಂಡೋಯ್ಯಿರಿ ಹಾಗೂ ಅದನ್ನು ಅಗತ್ಯವಾಗಿ ತೋರಿಸಿ ಎಂಬುದೇ ನಾನು ಮತದಾರರಿಗೆ ನೀಡುವ ಸಂದೇಶ" ಎಂದು ಹೇಳಿದರು.
"ಇಂದು ಯಾರೂ ದಾಖಲೆ ಪತ್ರವನ್ನು ತೋರಿಸುವುದಿಲ್ಲ ಎಂದು ಹೇಳಿದ್ದಾರೆ ಅವರಿಗೆ ಸೋಲಾಗುತ್ತದೆ, ಯಾರು ದಾಖಲೆಗಳನ್ನು ತೋರಿಸುತ್ತಾರೋ ಅವರಿಗೆ ಜಯವಾಗುತ್ತದೆ" ಎಂದು ಹೇಳಿದರು.
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಪ್ರತಿಭಟಿಸಿದ ಹಲವಾರು ಮಂದಿ "ಕಾಗಜ್ ನಹೀಂ ದಿಖಾಯೇಂಗೇ" (ಸರ್ಕಾರಕ್ಕೆ ನಮ್ಮ ದಾಖಲೆ ಪತ್ರಗಳನ್ನು ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದರು
ಇಂದು ದೆಹಲಿಯಲ್ಲಿ ನಡೆದ ಚುನಾವಣೆಯ ಫಲಿತಾಂಶವು ಫೆ.11ರ ಸೋಮವಾರ ಪ್ರಕಟವಾಗಲಿದೆ. 70 ಸದಸ್ಯರುಳ್ಳ ದೆಹಲಿ ವಿಧಾನಸಭೆಗೆ ನಡೆದ ಹಿಂದಿನ ಚುನಾವಣೆಯಲ್ಲಿ ಆಮ್ ಆದ್ಮೀ ಪಕ್ಷಕ್ಕೆ 67 ಸ್ಥಾನಗಳು ಹಾಗೂ ಬಿಜೆಪಿಗೆ 3 ಸ್ಥಾನಗಳು ಲಭ್ಯವಾಗಿದ್ದರೆ, ಕಾಂಗ್ರೆಸ್ಗೆ ಯಾವುದೇ ಕ್ಷೇತ್ರವೂ ಸಿಕ್ಕಿರಲಿಲ್ಲ.