ಮೈಸೂರು, ಫೆ 09 (Daijiworld News/MB) : "ದೇಶಾದ್ಯಂತ ಪ್ರತಿಭಟನೆಗಳು ನಡೆಯುವುದು ಸರ್ಕಾರದ ಮೌಲ್ಯಗಳು ಬದಲಾದಾಗ ಮಾತ್ರ . ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಿಎಎ, ಎನ್ಆರ್ಸಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ. ಸರ್ಕಾರ ಇಂತಹ ನಿರ್ಣಯ ತೆಗೆದುಕೊಂಡಿದೆ ಎಂದಾದರೆ ಸರ್ಕಾರ ತನ್ನ ಮೌಲ್ಯವನ್ನು ಕಳೆದುಕೊಂಡಿದೆ ಎಂದರ್ಥ. ಹಾಗಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ" ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಬೀದರ್ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರೋಧಿಸಿ ಮಾಡಿದ್ದ ನಾಟಕ ಸಂಬಂಧ ದೇಶದ್ರೋಹ ಪ್ರಕರಣ ದಾಖಲಿಸಿ ಆ ಶಾಲೆಯ ವಿದ್ಯಾರ್ಥಿಯ ತಾಯಿ ಹಾಗೂ ಶಿಕ್ಷಕಿಯ ಬಂಧನವನ್ನು ಖಂಡನೆ ಮಾಡಿ ಸಂವಿಧಾನ ರಕ್ಷಣಾ ಸಮಿತಿಯಿಂದ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, "ಶಾಹೀನ್ ಮೇಲೆ ಕೇಂದ್ರ ಸರ್ಕಾರಕ್ಕೆ ವ್ಯಾಮೋಹವಿರಬೇಕು. ಹಾಗಾಗಿ ಶಾಹೀನ್ ಶಾಲೆಗಳು ಶೈನ್ ಆಗುತ್ತದೆ. ಓರ್ವ ಪುಟ್ಟ ಬಾಲಕ ಸರ್ಕಾರದ ವಿರುದ್ಧವಾಗಿ ನಾಟಕ ಮಾಡುತ್ತಾನೆ ಎಂದಾದರೆ ಸರ್ಕಾರ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದರು.
"ನಮ್ಮ ಹಕ್ಕನ್ನು ವ್ಯಕ್ತಮಾಡುವ ಸ್ವಾತಂತ್ಯ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದಲ್ಲಿದೆ. ಆದರೆ ಕೇಂದ್ರ ಸರ್ಕಾರ ಅದಕ್ಕೆ ಅವಕಾಶ ನೀಡದೆ ನಮ್ಮೆಲ್ಲಾ ಹಕ್ಕುಗಳನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ. ಸರ್ಕಾರದ ಈ ನಡೆ ಬಹುಕಾಲ ನಡೆಯಲು ಸಾಧ್ಯವಿಲ್ಲ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
"ಕೇಂದ್ರ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ. ಅವರು ಯಾವುದನ್ನು ಮಾಡಬೇಡಿ ಎಂದು ಹೇಳುತ್ತಾರೋ ಅದನ್ನು ನಾವು ಮಾಡಬೇಕು. ಅವರು ಮಾಡಬೇಡಿ ಎಂದು ಹೇಳಿದಾಕ್ಷಣದಲ್ಲೇ ನಾವು ಮಾಡದಿದ್ದಲ್ಲಿ ಅವರೇ ಕಿಂಗ್ಗಳಾಗುತ್ತಾರೆ. ಅವರು ಮಾಡಬೇಡಿ ಎಂಬುದನ್ನು ನಾವು ಮಾಡಿದಲ್ಲಿ ನಾವು ಕಿಂಗ್ಗಳು. ಹಾಗಾಗಿ ಅವರ ವಿರುದ್ಧ ನಾವು ಮಾತಾನಾಡಬೇಕಿದೆ" ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ ಕೆಸರಗದ್ದೆ (ಜನ್ನಿ), ವಕೀಲೆ ಆಸ್ಮಾ ಪರ್ವೀನ್ ಹಾಗೂ ಪ್ರಗತಿಪರ ಚಿಂತಕ ಪ್ರೊ.ಶಬ್ಬೀರ್ ಮುಸ್ತಾಫ ಮಾತನಾಡಿದರು.