ಬೆಂಗಳೂರು, ಫೆ 09 (Daijiworld News/MB) : ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಕೈಗಾರಿಕಾ ನೀತಿ ಅಥವಾ ಕರ್ನಾಟಕ ನೀತಿ 2019-23ರ ಕರಡು ರೂಪಿಸಲಾಗಿದೆ ಅದನ್ನು ಅತೀ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶನಿವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ನಗರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ನೆಲಮಂಗಲ ಹಾಗೂ ಹರಿಹರ ವಸಾಹತುಗಳ ಸಣ್ಣ ಉದ್ದಿಮೆದಾರರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, "ಸರ್ಕಾರ ಈಗಾಗಲೇ ಸಣ್ಣ ಕೈಗಾರಿಕೆಗಳು ಕಳೆದ ಸಾಲಿನಲ್ಲಿ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ ಮೇಲಿನ ಬಡ್ಡಿದರವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ಬಡ್ಡಿ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಣ್ಣ ಕೈಗಾರಿಕೆಗಳು ವಿದ್ಯುತ್ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾಗಿದ್ದಲ್ಲಿ ಎಸ್ಕಾಂಗಳಿಂದ ಸ್ವಾಧೀನಾನುಭವ ಪತ್ರ ಪಡೆದುಕೊಳ್ಳಬೇಕು. ಈ ಪ್ರಮಾಣಪತ್ರವನ್ನು ಹಲವು ಸಣ್ಣ ಕೈಗಾರಿಕೆಗಳು ಹೊಂದಿರದ ಹಿನ್ನಲೆಯಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ತೊಡಕಾಗಿದೆ. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆಲಮಂಗಲದ 240 ಮತ್ತು ಹರಿಹರದ 78 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಹಾಗೆಯೇ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ಉದ್ಯಮಗಳಲ್ಲಿನ ಕಚ್ಚಾ ವಸ್ತುಗಳ ಮಾರಾಟ ಮತ್ತು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಕಾಸಿಯಾ ರೂಪಿಸಿದ kassia.msmemall.com ವೆಬ್ ಪೋರ್ಟಲ್ ಅನಾವರಣಗೊಳಿಸಲಾಯಿತು. ಈ ಪೋರ್ಟಲ್ ಮೂಲಕವೇ ವಹಿವಾಟು ನಡೆಸಿದರೆ, ಉದ್ಯಮಗಳಲ್ಲಿನ ಬಳಕೆ ಮಾಡಿ ಉಳಿದಿರುವ ವಸ್ತುಗಳು ಕಡಿಮೆ ಬೆಲೆಗೆ ಸಿಗಲಿವೆ.