ನವದೆಹಲಿ, ಫೆ 09 (Daijiworld News/MB) : ಶ್ರೀಲಂಕಾದಲ್ಲಿರುವ ಅಲ್ಪಸಂಖ್ಯಾತರಾದ ತಮಿಳರ ಹಿತಾಸಕ್ತಿಯನ್ನು ಶ್ರೀಲಂಕಾ ಸರಕಾರವು ಕಾಪಾಡಬೇಕು ಹಾಗೂ ಸಮಾನತೆ, ನ್ಯಾಯ ಹಾಗೂ ಘನತೆ ಪಡೆಯುವ ಅವರ ಇಚ್ಛೆಯನ್ನು ಪೂರೈಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತ ಭೇಟಿಯಲ್ಲಿರುವ ರಾಜಪಕ್ಸೆ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದ್ದು ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ.
ಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಜಾರಿ ಮಾಡಬೇಕಾಗಿದೆ. ಹಾಗೆಯೇ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಹಕಾರ, ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸಂಬಂಧಗಳ ವೃದ್ಧಿ, ಲಂಕಾದಲ್ಲಿ ಕೈಗೊಳ್ಳಲಾಗಿರುವ ಜಂಟಿ ಯೋಜನೆಗಳ ಅನುಷ್ಠಾನ, ದೀರ್ಘಾವಧಿಯಿಂದ ಇರುವಂಥ ಮೀನುಗಾರರಿಗೆ ಸಂಬಂಧಿಸಿದ ವಿವಾದಗಳನ್ನು ಮಾನವೀಯ ನೆಲೆಯಲ್ಲಿ ಇತ್ಯರ್ಥ ಮಾಡಬೇಕು, ಹೀಗೆ ಹಲವು ವಿಚಾರಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿದ್ದು, ತಮಿಳರ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
ಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಜಾರಿಯಾದಲ್ಲಿ ಲಂಕಾದಲ್ಲಿರುವ ತಮಿಳರಿಗೂ ಅಧಿಕಾರ ಸಿಗಲಿದೆ.