ಬೆಂಗಳೂರು, ಫೆ 09 (Daijiworld News/MB) : "ನೂತನ ಸಚಿವರ ಖಾತೆ ಹಂಚಿಕೆಯ ಪಟ್ಟಿ ಸಿದ್ಧವಾಗಿದ್ದು ಸೋಮವಾರ ಖಾತೆ ಹಂಚಿಕೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶನಿವಾರ ವಿಧಾನಸೌಧದ ಮುಂಭಾಗ ಬಿಬಿಎಂಪಿ ವತಿಯಿಂದ ಆರಂಭಿಸಲಾದ ಹಲವು ಸೌಲಭ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎರಡನೇ ಶನಿವಾರ ರಜೆಯಿರುವ ಹಿನ್ನಲೆಯಲ್ಲಿ ಇಂದು ಖಾತೆ ಹಂಚಿಕೆ ಮಾಡುತ್ತಿಲ್ಲ, ಸೋಮವಾರ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ವಲಸಿಗರು ಬಿಜೆಪಿ ಸೇರುವ ಮೊದಲು ಇಂತಹದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿದ್ದರು. ಮೈತ್ರಿ ಸರ್ಕಾರ ಉರುಳಿಸಿ ತಮ್ಮ ಸರ್ಕಾರ ಮಾಡುವ ಹಿನ್ನಲೆಯಲ್ಲಿ ಬಿಜೆಪಿ ಅವರ ಬೇಡಿಕೆಗೆ ಅಸ್ತು ಎಂದು ಹೇಳಿತ್ತು. ಆದರೆ ಅಪೇಕ್ಷೆ ಪಟ್ಟಿರುವ ಖಾತೆ ಕೊಡಲಾಗದು ಎಂದು ಯಡಿಯೂರಪ್ಪ ಅವರು ಈ ಮೊದಲೇ ಹೇಳಿದ್ದಾರೆ.