ಬೆಂಗಳೂರು, ಫೆ 9 (Daijiworld News/MSP): ಚೀನಾದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಲ್ಲೆಡೆ ರೋಗಾಣು ಹರಡುವ ಭೀತಿ ಕೂಡ ಜಾಸ್ತಿಯಾಗುತ್ತಿದೆ. ಭಾರತದಲ್ಲಿಯೂ ಕೊರೋನಾ ಸೋಂಕು ಬಾಧಿತರು ಪತ್ತೆಯಾಗಿದ್ದಾರೆ. ಈ ಕಾರಣಕ್ಕೆ ಆಸ್ಪತ್ರೆ, ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲೆಡೆ ಜನರು ಓಡಾಡುವಾಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೋಗುವ ಪರಿಸ್ಥಿತಿ ನಮ್ಮಲ್ಲಿಯೂ ಮುಂದಿನ ದಿನಗಳಲ್ಲಿ ಬರುವ ಆತಂಕವಿದೆ. ಕೊರೋನಾ ರೋಗದ ಆತಂಕ ಜನರಲ್ಲಿ ಈ ರೀತಿ ಇರಬೇಕಾದರೆ, ಬೆಂಗಳೂರು ನಗರ ಪೊಲೀಸರು ತಾತ್ಕಾಲಿಕವಾಗಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಸ್ಥಗಿತಗೊಳಿಸಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಏಕೆಂದರೆ, ಹೆಚ್ಚಾಗಿ ರಾತ್ರಿವೇಳೆಯಲ್ಲಿ ವಾಹನ ಸವಾರರನ್ನು ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸುವ ಸಂಚಾರಿ ಪೊಲೀಸರು ಕೂಡ ಕೊರೋನಾ ವೈರಸ್ಗೆ ಹೆದರಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣದಿಂದ ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ? ಎಂಬುದನ್ನು ಬಾಯಿಗೆ ಸಾಧನವೊಂದನ್ನು ಇಟ್ಟು ತಪಾಸಣೆ ಮಾಡುವುದಕ್ಕೆ ಪೊಲೀಸರು ಅನಿವಾರ್ಯತೆ ಇರುವ ಕಾರಣ ಪೊಲೀಸರು ಇದೀಗ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯನ್ನು ಕೆಲವು ದಿನಗಳವರೆಗೆ ಕೈಬಿಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊರೊನಾ ವೈರಸ್ ಹರಡುವಿಕೆ ಹಾಗೂ ಅದರ ಸ್ಥಿತಿ-ಗತಿ ಬಗ್ಗೆ ಸದ್ಯ ರಾಜೀವ್ ಗಾಂಧಿ ವೈದ್ಯಕೀಯ ವಿವಿಯಿಂದ ವರದಿಯನ್ನು ಕೇಳಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚಿಂತನೆಯನ್ನು ಬೆಂಗಳೂರು ಪೊಲೀಸರು ನಡೆಸಲಿದ್ದಾರೆ ಎನ್ನಲಾಗಿದೆ.