ಬೆಂಗಳೂರು, ಫೆ 09 (Daijiworld News/MB) : ಬಿಜೆಪಿ ಕರ್ನಾಟಕ ಘಟಕವು ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಕೈಲಿ ಹಿಡಿದು ಮತಗಟ್ಟೆ ಕೇಂದ್ರಕ್ಕೆ ಬಂದ ಮುಸ್ಲಿಂ ಮಹಿಳೆಯರ ವಿಡಿಯೊ ತುಣುಕಿನೊಂದಿಗೆ ಶನಿವಾರ ಟ್ವೀಟ್ ಮಾಡಿದ್ದು ಅದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಾವು ಕಾಗದಗಳನ್ನು ತೋರಿಸುವುದಿಲ್ಲ (ಹಮ್ ಕಾಗಜ್ ನಹಿ ದಿಖಾಯೆಂಗೇ) ಎನ್ನುವ ಹೋರಾಟದ ಘೋಷಣೆಯನ್ನೇ ಬಿಜೆಪಿ ಕರ್ನಾಟಕ ಘಟಕ ವ್ಯಂಗ್ಯ ಮಾಡಿದ್ದು ಇದು ಒಂದು ಸಮುದಾಯದ ಬಗ್ಗೆ ಪಕ್ಷಕ್ಕೆ ಯಾವ ನಿಲುವಿದೆ ಎಂಬುದರ ಪ್ರತೀಕ ಎಂದು ಆರೋಪ ಮಾಡಿದ್ದಾರೆ.
ಬಿಜೆಪಿಯು ತನ್ನ ಟ್ವೀಟ್ನಲ್ಲಿ ಕಾಗಜ್ ನಹಿ ದಿಖಾಯೆಂಗೇ ಹಮ್ ಸಾಲಿನೊಂದಿಗೆ ಆರಂಭಿಸಿದ್ದು ದಾಖಲೆಗಳನ್ನು ಜೋಪಾನವಾಗಿರಿಸಿಕೊಳ್ಳಿ. ಅವನ್ನು ಎನ್ಪಿಆರ್ ವೇಳೆ ತೋರಿಸಬೇಕಾಗುತ್ತೆ ಎಂದು ಬರೆದಿದ್ದಾರೆ.
ಇದಕ್ಕೆ ಕಡಕ್ ಆಗಿ ಪ್ರತಿಕ್ರಿಯೆ ನೀಡಿರುವ ಶೇಖ್ ಫರ್ಹಾ ಎಂಬಾಕೆ, "ನಾವು ನಮ್ಮ ಕಾಗದಗಳನ್ನು ಭಾರತದ ಅಭ್ಯುದಯಕ್ಕಾಗಿ ತೋರಿಸುತ್ತೇವೆ. ನಿಮ್ಮ ಪಕ್ಷದ ದುರಹಂಕಾರ ತಣಿಸಲು ಅಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದೇಶದ ಜನರು ಇಟ್ಟಿರುವ ನಂಬಿಕೆಯನ್ನು ಈ ಸಾಲು ತೋರಿಸುತ್ತದೆ. ನಿಮ್ಮ ದುರಹಂಕಾರದ ಪಕ್ಷಕ್ಕೆ ಇಂದಿಗೂ ನಮ್ಮದು ಅದೇ ಉತ್ತರ. ಹಂ ಕಾಗಜ್ ನಹಿ ದಿಖಾಯೆಂಗೇ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರಾಯ್ ಸಂಸತ್ತಿನಲ್ಲಿ "ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್ಪಿಆರ್) ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಸಂಗ್ರಹಿಸುವುದಿಲ್ಲ. ಆಧಾರ್ ಸಂಖ್ಯೆ ಕುರಿತ ಮಾಹಿತಿ ನೀಡುವುದು ಸಹ ಕಡ್ಡಾಯವಲ್ಲ. ಎನ್ಪಿಆರ್ ಸಿದ್ಧಪಡಿಸುವುದಕ್ಕೆ ಸಂಬಂಧಿಸಿ ಕೆಲವು ರಾಜ್ಯಗಳು ತಮ್ಮ ಅಸಮಾಧಾನ, ಆತಂಕವನ್ನು ವ್ಯಕ್ತಪಡಿಸಿವೆ. ಕೇಂದ್ರವು ಆಯಾ ರಾಜ್ಯಗಳ ಜೊತೆ ಈ ಅಂಶಗಳ ಕುರಿತಂತೆ ಚರ್ಚೆ ನಡೆಸುತ್ತಿದೆ. ಜನಸಂಖ್ಯೆ ಹಂಚಿಕೆ ಕುರಿತಂತೆ ಪ್ರತಿ ವ್ಯಕ್ತಿ, ಕುಟುಂಬದ ಮಾಹಿತಿಯನ್ನು ಪರಿಷ್ಕರಿಸಲಾಗುತ್ತದೆ" ಎಂದು ಹೇಳಿದ್ದರು.
ಹಾಗೆಯೇ ಎನ್ಪಿಆರ್ ಕುರಿತು ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ, "ಎನ್ಪಿಆರ್ ಒಂದು ಸಾಮಾನ್ಯ ಆಡಳಿತಾತ್ಮಕ ಕಾರ್ಯ. ಜನಸಂಖ್ಯೆ ಮಾಹಿತಿ ಪರಿಷ್ಕರಿಸುವುದರಿಂದ ಬಡವರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಈ ಮಾಹಿತಿ ಆಧರಿಸಿ ಯಾರನ್ನೂ ನಾವು ಬಂಧಿಸುವುದಿಲ್ಲ, ವಿಚಾರಣೆಗೂ ಒಳಪಡಿಸುವುದಿಲ್ಲ. ವಿರೋಧ ಪಕ್ಷಗಳು ಎನ್ಪಿಆರ್ ಬಗ್ಗೆ ದೇಶದಲ್ಲಿ ಸುಳ್ಳು ಮಾಹಿತಿ ಹರಡುತ್ತಿವೆ" ಎಂದು ಹೇಳಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು "ಎನ್ಪಿಆರ್ ಮತ್ತು ಎನ್ಆರ್ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ಸಂಪರ್ಕದ ಯಾವುದೇ ಆಲೋಚನೆ ಇಲ್ಲ" ಎಂದು ಹೇಳಿದ್ದರು.
ಆದರೆ ಬಿಜೆಪಿ ಕರ್ನಾಟಕ ಘಟಕವು ತನ್ನ ಟ್ವೀಟ್ ಮುಖೇನ ಬೇರೆಯೇ ಸಂದೇಶ ನೀಡಿದ್ದು, ಮೋದಿ ಆಶಯಕ್ಕೆ ಸ್ಪಂದಿಸುವಂತೆ ನಡೆದುಕೊಳ್ಳಿ. ದೇಶವನ್ನು ಹಳಿ ತಪ್ಪಿಸಬೇಡಿ ಎಂದು ಕೆಲವರು ಕಾಮೆಂಟ್ ಮೂಲಕ ಹೇಳಿದ್ದಾರೆ.