ಬೆಂಗಳೂರು, ಫೆ.09 (Daijiworld News/PY) : "ಆರ್ಎಸ್ಎಸ್ನವರು ಪಥ ಸಂಚಲನವಾದರೂ ಮಾಡಲಿ, ಉರುಳು ಸೇವೆಯಾದರೂ ಮಾಡಲಿ ಅಥವಾ ಎಲ್ಲರಿಗೂ ಕಾವಿಯಾದರೂ ತೊಡಿಸಲಿ ನಮಗೇನೂ ಅಭ್ಯಂತರವಿಲ್ಲ. ಬೇಕಾದರೆ ನಾನೇ ಅವರಿಗೆ ಊಟ ಹಾಕಿಸುತ್ತೇನೆ" ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮನಗರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಡೆಸಲಾಗುತ್ತಿರುವ ಬೃಹತ್ ಆರ್ಎಸ್ಎಸ್ ಪಥ ಸಂಚಲನದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು, "ಆರ್ಎಸ್ಎಸ್ನವರು ಪಥ ಸಂಚಲನವಾದರೂ ಮಾಡಲಿ, ಉರುಳು ಸೇವೆಯಾದರೂ ಮಾಡಲಿ ಅಥವಾ ಎಲ್ಲರಿಗೂ ಕಾವಿಯಾದರೂ ತೊಡಿಸಲಿ ನಮಗೇನೂ ಅಭ್ಯಂತರವಿಲ್ಲ" ಎಂದು ಹೇಳಿದ್ದಾರೆ.
"ಬಿಜೆಪಿ ಅವರು ಡಿ.ಕೆ. ಸುರೇಶ್ ಮಾಡುತ್ತಿರುವ ಜನಪರ ಕೆಲಸವನ್ನು ಸಹಿಸಲಾಗದೆ ಈ ರೀತಿಯಾದ ತಂತ್ರ ಮಾಡಿದ್ದಾರೆ. ಅವರು ಆರ್ಎಸ್ಎಸ್ ಅನ್ನು ಮುಂದೆ ಬಿಟ್ಟು, ಜನರ ಭಾವನೆಯನ್ನು ಕೆರಳಿಸಲು ಹೊರಟಿದ್ದಾರೆ. ನಾವು ನಮ್ಮ ರಾಜಕೀಯ ಮಾಡುತ್ತೇವೆ. ಇವರು ಏನೇ ಮಾಡಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ತಿಳಿಸಿದ್ದಾರೆ.
"ಪಾಪ ನನ್ನ ಸಹಹೋದರ ಜನರ ಪರ ಕೆಲಸ ಮಾಡುತ್ತಿದ್ದಾನೆ. ಆದರೆ ಅದನ್ನು ಸಹಿಸದೇ ಬಿಜೆಪಿಯವರು ಈ ರೀತಿಯಾದ ಉಪಾಯವನ್ನು ಮಾಡುತ್ತಿದ್ದಾರೆ. ಮಾವಿನ ಹಣ್ಣು ಕೆಂಪಗಿದ್ದರೆ ಜನ ನೋಡ್ತಾರೆ ಹಾಗೆಯೇ ಮನುಷ್ಯ ಬೆಳ್ಳಗೆ, ಸ್ಟ್ರಾಂಗ್ ಆಗಿದ್ದರೆ ಜನ ನೋಡ್ತಾರೆ. ನಾವು ಹಾಗೂ ಜೆಡಿಎಸ್ನವರು ರಾಜಕೀಯ ಚದುರಂಗ ಆಟವನ್ನು ಚೆನ್ನಾಗಿ ಆಡಿದ್ದರೆ ಬಿಜೆಪಿ 10 ಸೀಟು ಕೂಡ ಬರುತ್ತಿರಲಿಲ್ಲ" ಎಂದಿದ್ದಾರೆ.
ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದವನ್ನು ದಾಳವಾಗಿ ಬಳಸಿಕೊಂಡು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕನಕಪುರಕ್ಕೆ ತೆರಳಿದ್ದರು. ಈಗ ರಾಮನಗರದಲ್ಲಿ ಪಥ ಸಂಚಲನ ನಡೆಸಲಾಗುತ್ತಿದ್ದು, ರಾಮನಗರದ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ ತಾಲೂಕಿನ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.