ಚಿತ್ರದುರ್ಗ, ಫೆ 09 (Daijiworld News/MB) : ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಲ್ಲಿಕಾರ್ಜುನ ಖರ್ಗೆ ರಾಜಕೀಯವಾಗಿ ಆರಿದ ದೀಪ. ಕತ್ತಲೆಯಲ್ಲಿ ಇರುವ ಖರ್ಗೆ, ದುಃಖದಲ್ಲಿ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, "ನರೇಂದ್ರ ಮೋದಿಯವರು ಜೀರೋ ಕ್ಯಾಂಡಲ್ ಬಲ್ಬ್ ಇದ್ದಹಾಗೆ, ಬೆಳಕು ನೀಡುವುದಿಲ್ಲ" ಎಂದು ಖರ್ಗೆ ಟೇಕೆ ಮಾಡಿದ್ದಕ್ಕೆ ತಿರುಗೇಟು ನೀಡಿ, "ಸ್ವತಃ ಖರ್ಗೆ ಅವರು ಕತ್ತಲೆಯಲ್ಲಿ ಇದ್ದಾರೆ. ಕಾಂಗ್ರೆಸ್ ಅವರನ್ನು ರಾಜಕೀಯವಾಗಿ ಮೇಲಕ್ಕೆತ್ತುವ ಯತ್ನ ಮಾಡುತ್ತಿಲ್ಲ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಯೂ ಆಯ್ಕೆ ಮಾಡಿಲ್ಲ. ಮೋದಿ ಸಾವಿರ ವೋಲ್ಟೇಜ್ ಹಾಲೋಜಿನ್ ಬಲ್ಬ್ ಇದ್ದ ಹಾಗೆ. ಜಗತ್ತಿಗೆ ಬೆಳಕು ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖ ಜೆಡಿಎಸ್. ಭಾರತ್ ಮಾತಾಕಿ ಜೈ ಎಂದುಈ ಪಕ್ಷದ ಕಾರ್ಯಕರ್ತರು ಹೇಳುವುದಿಲ್ಲ. ರಾಷ್ಟಧ್ವಜ ಹಾರಿಸುವುದಿಲ್ಲ ಎಂದು ದೂರಿದರು.
ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನು ಅನುಸರಣೆ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂ ಭೇದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ನಾಯಕರು ಬಿ.ಎಸ್.ಯಡಿಯೂರಪ್ಪನವರು. ಸಚಿವ ಸಂಪುಟ ವಿಸ್ತರಣೆಯು ಅವರ ಆಲೋಚನೆಯಂತೆಯೇ ಆಗಿದೆ. ಅವರು ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿಗೆ ಬೇರೆ ಪಕ್ಷದ ಮುಖಂಡರು ಹಾಲು- ಸಕ್ಕರೆ ಬೆರೆತಂತೆ. ಹಾಲು ಮಾತ್ರ ಕಾಣುತ್ತದೆ ಹೊರತು ಸಕ್ಕರೆಯಲ್ಲ. ಪಕ್ಷದೊಳಗೆ ಯಾವುದೇ ಭಿನ್ನಮತ ಸೃಷ್ಟಿಯಾಗಿಲ್ಲ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಥಿತಿ ನೋಡಿದರೆ ಅಯ್ಯೋ ಎಂದನಿಸುತ್ತದೆ. ಶಾಸಕಾಂಗ ಪಕ್ಷದ ನಾಯಕರಾಗಲು ಹೈಕಮಾಂಡ್ ಎದುರು ಮಂಡಿಯೂರಿದ್ದಾರೆ. ಕಾಂಗ್ರೆಸ್ಗೆ ಇನ್ನೂ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ಮಾಡಲು ಸಾಧ್ಯವಾಗಿಲ್ಲ. ಮೊದಲು ನಿಮ್ಮ ಪಕ್ಷಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆ ಬಳಿಕ ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.