ನವದೆಹಲಿ, ಫೆ.09 (Daijiworld News/PY): ದೆಹಲಿಯಲ್ಲಿ 30 ಭದ್ರತಾ ಕೊಠಡಿಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದ್ದು, ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಎಪಿ ಪಕ್ಷವು ಶನಿವಾರ ನಡೆದ ಸಭೆಯ ನಂತರ ತಿಳಿಸಿದೆ.
ಎಎಪಿ ಪಕ್ಷದ ಅರವಿಂದ್ ಕೇಜ್ರಿವಾಲ್ ಶನಿವಾರ ತಡರಾತ್ರಿಯವರೆಗೂ ಸಭೆ ನಡೆಸಿ ಮತಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳ ಸುತ್ತ ಕಾವಲು ಕಾಯಲು ಪಕ್ಷದ ಸ್ವಯಂಸೇವಕರನ್ನು ನಿಯೋಜಿಸಲು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರಾದ ಸಂಜಯ್ ಸಿಂಗ್, ಮನಿಷ್ ಸಿಸೋಡಿಯಾ, ಪ್ರಶಾಂತ್ ಕಿಶೋರ್ ಸೇರಿದಂತೆ ಹಲವು ಮುಖಂಡರ ಜೊತೆ ಸಭೆ ನಡೆಸಿ ಭದ್ರತಾ ಕೊಠಡಿಯ ಸುತ್ತಮುತ್ತ ಸ್ವಯಂ ಸೇವಕರನ್ನು ನಿಯೋಜಿಸುವ ತೀರ್ಮಾನಕ್ಕೆ ಬಂದಿದ್ದು, ಸ್ವಯಂ ಸೇವಕರು ಮಂಗಳವಾರ ಬೆಳಗಿನವರೆಗೂ ಪಾಳಿಯಲ್ಲಿ ಗಸ್ತು ತಿರುಗುವಂತೆ ನಿಯೋಜಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಅವರು, ಕೆಲವರು ಬಬಾರ್ಪುರ್ ಎಂಬಲ್ಲಿ ಇವಿಎಂ ಯಂತ್ರದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಕೇಳಿದ್ದೇವೆ. ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಅಲ್ಲದೆ, ಪಕ್ಷದಲ್ಲಿರುವ ಸ್ವಯಂ ಸೇವಕರು ದೆಹಲಿಯಲ್ಲಿ ಮತಯಂತ್ರಗಳನ್ನು ಇರಿಸಿರುವ 30 ಕೊಠಡಿಗಳ ಸುತ್ತ ಸ್ವಯಂ ಸೇವಕರು ಕಾವಲು ಕಾಯಲಿದ್ದಾರೆ ಎಂದು ತಿಳಿಸಿದರು.
ಚುನಾವಣೋತ್ತರ ಸಮೀಕ್ಷೆಯಲ್ಲಿ ಎಎಪಿ ಪಕ್ಷವು 59 ರಿಂದ 68 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 5 ರಿಂದ 19 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದೆ.