ಚಿಕ್ಕಮಗಳೂರು, ಫೆ.09 (Daijiworld News/PY): "ಬೀದಿಯಲ್ಲಿ ಜನರು ಕಣ್ಣೀರಿಡುತ್ತಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊಣೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಕೊಪ್ಪ ತಾಲೂಕಿನ ಹರಿಹರಪುರ ಪ್ರಭೋದಿನಿ ಗುರುಕುಲದಲ್ಲಿ ಆಯೋಜಿಸಿದ್ದ ಅರ್ಧಮಂಡಲೋತ್ಸವ ಭಾಗವಹಿಸಿದ್ದ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ 11 ಲಕ್ಷ ಮನೆಗೆ ಮಂಜೂರಾತಿ ನೀಡಿದ್ದರು. ಆದರೆ, ಹಣ ಇಡದೆ ಮನೆಗಳ ಮಂಜೂರಾತಿ ಮಾಡಿದರು. ಹಣ ಇಟ್ಟಿದ್ದರೆ ಮನೆ ಅರ್ಧಕ್ಕೆ ನಿಲ್ಲುತ್ತಿರಲಿಲ್ಲ" ಎಂದರು.
ರಾಮನಗರದಲ್ಲಿ ಆರ್ಎಸ್ಎಸ್ ಪಥಸಂಚಲನದ ವಿಚಾರವಾಗಿ ಡಿಕೆಶಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಸ್ವಯಂಸೇವಕನ ಭಾವನೆ ಇದ್ದರೆ ಒಳ್ಳೆಯದ್ದನ್ನೇ ಬಯಸುತ್ತಾರೆ. ನಾನೂ ಸಂಘದ ಪ್ರಾರ್ಥನೆ ಹೇಳ್ತೀನಿ ಎಂದಿದ್ದರು. ರವಿ, ನಿನಗೆ ಪ್ರಾರ್ಥನೆ ಬರುತ್ತಾ. ನಾನು ಹೇಳ್ತೀನಿ ಎನ್ನುತ್ತಿದ್ದರು. ಹಲವು ಬಾರಿ ಸದನದಲ್ಲಿ ನಾನೂ ಸ್ವಯಂ ಸೇವಕನೆಂದು ಪರಿಚಯಿಸಿಕೊಂಡಿದ್ದರು" ಎಂದು ತಿಳಿಸಿದರು.