ಶಿವಮೊಗ್ಗ, ಫೆ.09 (Daijiworld News/PY): "ಯಡಿಯೂರಪ್ಪ ಅವರು ಮಂತ್ರಿ ಮಂಡಲ ವಿಸ್ತರಣೆಗೆ 6 ತಿಂಗಳು ತೆಗೆದುಕೊಂಡಿದ್ದಾರೆ. ಮಂತ್ರಿಗಳು ಬರೀ ಕಾರಿನಲ್ಲಿ ತಿರುಗಾಡುವ ಕೆಲಸವನ್ನಷ್ಟೇ ಮಾಡಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಶಿವಮೊಗ್ಗ ಜಿಲ್ಲೆಯ ಸೊರಬದ ಆನವಟ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು , "ಸಿಎಂ ಬಿಎಸ್ವೈ ಅವರು ಮಂತ್ರಿ ಮಂಡಲ ವಿಸ್ತರಣೆಗೆ 6 ತಿಂಗಳು ತೆಗೆದುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಳೆದ 6 ತಿಂಗಳಿನಿಂದ ಸರ್ಕಾರವೇ ಇರಲಿಲ್ಲ. ಯಾರೂ ಏನೂ ಕೆಲಸ ಮಾಡಿಲ್ಲ. ಮಂತ್ರಿಗಳು ಬರೀ ಕಾರಿನಲ್ಲಿ ತಿರುಗಾಡುವ ಕೆಲಸವನ್ನಷ್ಟೇ ಮಾಡಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿಯ ಕಾರ್ಯಗಳು ನಡೆದಿಲ್ಲ" ಎಂದು ತಿಳಿಸಿದರು.
"ಬಿಜೆಪಿ ಪಕ್ಷದಲ್ಲಿ ಹೈಕಮಾಂಡ್ ಅನುಮತಿ ಇಲ್ಲದೆ ಖಾತೆ ಹಂಚಿಕೆ ಮಾಡಬಾರದು ಎಂದು ಆದೇಶಹೊರಡಿಸಲಾಗಿದೆ. ಇದೇ ಕಾರಣದಿಂದ ಸಂಪುಟ ವಿಸ್ತರಣೆ ತಡವಾಗಿದೆ. ಇದರ ಪರಿಣಾಮ ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗಿದೆ. ಮಂತ್ರಿ ಮಂಡಲ ರಚಿಸುವುದು ಹಾಗೂ ಖಾತೆಯನ್ನು ಹಂಚುವ ಸಂಪೂರ್ಣ ವಿವೇಚನಾ ಅಧಿಕಾರ ಹಾಗೂ ಸ್ವಾತಂತ್ರ್ಯ ಮುಖ್ಯಮಂತ್ರಿಗಿದೆ. ಆದರೆ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಂದ ಈ ಅಧಿಕಾರವನ್ನು ಕಸಿದುಕೊಂಡಿದೆ" ಎಂದರು.
"ಸುಳ್ಳು ಹೇಳುವುದು ಬಿಜೆಪಿ ಹಾಗೂ ಯಡಿಯೂರಪ್ಪನವರ ಸ್ವಭಾವ. ಇಂತಹ ಸರ್ಕಾರದಿಂದ ಜನ ಏನನ್ನೂ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ" ಎಂದು ಹೇಳಿದರು.