ಮೈಸೂರು, ಫೆ.09 (Daijiworld News/PY): "ಈ ಹಿಂದೆ ಸಂಪುಟ ದರ್ಜೆ ಸಚಿವರಾಗಿ ಉನ್ನತ ಕೆಲಸಗಳನ್ನು ನಿರ್ವಹಿಸಿದ್ದೇವೆ. ಹೀಗಾಗಿ ನನಗೆ ಮತ್ತು ಎಂಟಿಬಿ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಅವಶ್ಯಕತೆಯಿಲ್ಲ. ಆ ಸ್ಥಾನಗಳನ್ನು ಪಕ್ಷದ ಹೊಸಬರಿಗೆ, ಕಾರ್ಯಕರ್ತರಿಗೆ ನೀಡಲಿ" ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಈ ಹಿಂದೆ ಸಂಪುಟ ದರ್ಜೆ ಸಚಿವರಾಗಿ ಉನ್ನತ ಕಾರ್ಯಗಳನ್ನು ನಿರ್ವಹಿಸಿದ್ದೇವೆ. ಹೀಗಾಗಿ ನನಗೂ ಎಂಟಿಬಿ ಅವರಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಅವಶ್ಯಕತೆಯಿಲ್ಲ. ಆ ಸ್ಥಾನಗಳನ್ನು ಪಕ್ಷದ ಹೊಸಬರಿಗೆ, ಕಾರ್ಯಕರ್ತರಿಗೆ ಕೊಡಲಿ. ಈಗಲೂ ನಾವು ಬಿಎಸ್ಐ ಅವರನ್ನು ನಂಬಿದ್ದೇವೆ" ಎಂದರು.
"ರಾಜ್ಯದಲ್ಲಿ ಬಿಜೆಪಿ ಸರಕಾರ ಎಷ್ಟು ದಿನ ಇರುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ನಿಮ್ಮ ಮೈತ್ರಿ ಸರಕಾರಕ್ಕಿಂತ ಹೆಚ್ಚು ದಿನ ಇರುತ್ತದೆ ಎನ್ನುವುದಂತು ಸತ್ಯ. ಈ ಹಿಂದೆ ಇದ್ದ ಮೈತ್ರಿ ಸರಕಾರಕ್ಕಿಂತ ಬಿಜೆಪಿಯು ಹೆಚ್ಚಿನ ಅವಧಿ ಅಧಿಕಾರದಲ್ಲಿರುತ್ತದೆ" ಎಂದು ಹೇಳಿದರು.
"ಕುಮಾರಸ್ವಾಮಿ ಅವರು ಒಮ್ಮೆ ಮಾತನಾಡುವಾಗ ಅವರ ಬಗ್ಗೆಯೂ ಯೋಚಿಸಿಕೊಳ್ಳಲಿ. ತಮ್ಮ ಸರಕಾರ ಎಷ್ಟು ದಿನ ನಡೆಯಿತೆಂದು ಯೋಚಿಸಲಿ ಅಧಿಕಾರ ಕಳೆದುಕೊಂಡ ಭರಾಟೆಯಲ್ಲಿ ಅವರು ಮನಬಂದಂತೆ ಮಾತನಾಡುತ್ತಾರೆ" ಎಂದರು.