ಬೆಂಗಳೂರು, ಫೆ.09 (Daijiworld News/PY): "ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ಆಘಾತ ನೀಡಿದೆ. ಮೀಸಲಾತಿ ನೀಡುವುದು ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ. ನಾನು ವೈಯುಕ್ತಿಕವಾಗಿ ಈ ತೀರ್ಪನ್ನು ಖಂಡಿಸುತ್ತೇನೆ" ಎಂದು ಮಾಜಿ ಸಂಸದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೀಸಲಾತಿ ಮೂಲಭೂತ ಹಕ್ಕಲ್ಲ ಎನ್ನುವ ಸುಪ್ರೀಂಕೋರ್ಟ್ ತೀರ್ಪು ಇಡೀ ರಾಷ್ಟ್ರದಲ್ಲಿ ತಲ್ಲಣಗೊಳಿಸುವಂತಾಗಿದೆ. ಈ ತೀರ್ಪು ನನಗೆ ಆಘಾತ ತಂದಿದೆ. ಮೀಸಲಾತಿ ಮೂಲಭೂತ ಹಕ್ಕಲ್ಲ ಅನ್ನುವ ತೀರ್ಪನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತೇನೆ" ಎಂದರು.
"ಉತ್ತರಾಖಾಂಡ ಸರ್ಕಾರ ನಡೆಯನ್ನು ಉತ್ತರ ಪ್ರದೇಶ ಸರಕಾರ ಅನುಸರಿಸುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶ ಮಾಡುವ ಅಗತ್ಯ ಇದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ದೇಶದಲ್ಲಿ ತಪ್ಪು ದಾರಿಗೆ ಕೆಲವರು ಇಳಿಯುವ ಭಯವಿದೆ. ಇಂತಹ ತೀರ್ಪಿಗೆ ಉತ್ತರಾಖಂಡ ಸರ್ಕಾರವೇ ಕಾರಣ. ತೀರ್ಪು ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕಿದೆ" ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸುವಂತೆ ನ್ಯಾಯಾಲಗಳು ಸರಕಾರಕ್ಕೆ ಆದೇಶ ನೀಡುವಂತಿಲ್ಲ. ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿತ್ತು.