ಬೆಳಗಾವಿ, ಫೆ.09 (Daijiworld News/PY): "ಡಿಕೆ ಶಿವಕುಮಾರ್ ನನ್ನನ್ನು ವಿರೋಧಿಸಿದ್ದಕ್ಕೆ ನಾನು ದೊಡ್ಡ ನಾಯಕನಾದೆ. ಹೀಗಾಗಿ ಡಿಕೆಶಿಯವರಿಗೆ ಧನ್ಯವಾದಗಳು. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಯಿತು" ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ರಾಜಕೀಯದಲ್ಲಿ ಜನರ ನಿರ್ಧಾರ ಮುಖ್ಯ. ನಮಗೆ ಬಂದ ಸ್ಥಿತಿ ನಮ್ಮ ವೈರಿಗೂ ಬರಬಾರದು. 14 ತಿಂಗಳಿಂದ ನಮ್ಮನ್ನು ಅಪಹಾಸ್ಯ ಮಾಡಿದರು. 14 ತಿಂಗಳಲ್ಲಿ ನಾವು ಮಾನಸಿಕವಾಗಿ ನೊಂದಿದ್ದೇವೆ. 36 ಜನ ಶಾಸಕರಲ್ಲಿ ಕೊನೆಗೆ ಉಳಿದಿದ್ದು 17 ಜನ. ಯಶಸ್ಸು ಸಿಕ್ಕಿದೆ ಎಂದು ನಾವು ಬೀಗುವುದಿಲ್ಲ" ಎಂದು ತಿಳಿಸಿದರು.
"ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಅಥಣಿ ಕ್ಷೇತ್ರ. ಬಿಜೆಪಿಯಲ್ಲಿ ಸಚಿವನಾಗುತ್ತೇನೆ ಎಂದುಕೊಂಡಿರಲಿಲ್ಲ. ರಾಜಕೀಯ ಸಾಕಾದರೆ ಬಿಜೆಪಿಯಲ್ಲೇ ನಿವೃತ್ತಿ ಘೋಷಿಸುತ್ತೇನೆ. ಕೆಲವರು ನನ್ನ ಬಗ್ಗೆ ವದಂತಿ ಹಬ್ಬಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ನನ್ನನ್ನು ವಿರೋಧಿಸಿದ್ದಕ್ಕೆ ನಾನು ದೊಡ್ಡ ನಾಯಕನಾದೆ. ಹೀಗಾಗಿ ಡಿಕೆಶಿಯವರಿಗೆ ಧನ್ಯವಾದಗಳು. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಯಿತು" ಎಂದರು.
"ಚುನಾವಣೆಯಲ್ಲಿ ನನ್ನನ್ನು ವಿರೋಧ ಮಾಡಿದವರು ನಮ್ಮವರೇ. ಚುನಾವಣೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರು. ನಾನು ಒಳ್ಳೆಯದಕ್ಕಾಗಿ ಹಠ ಮಾಡುತ್ತೇನೆ. ಆದರೆ ನಾನು ನಂಬಿದ್ದು ಬಿಎಸ್ವೈ ಹಾಗೂ ಅಮಿತ್ ಶಾ ಅವರನ್ನು. ನೀರಾವರಿ ಕೊಡುತ್ತಾರೋ, ಲೈಬ್ರರಿ ಇರುತ್ತೋ ಗೊತ್ತಿಲ್ಲ. ಗೋಕಾಕ್ನಲ್ಲಿ ಸೊಕ್ಕಿನಿಂದ ಮಾತ್ರ ಸೋಲಬೇಕು" ಎಂದು ಹೇಳಿದರು.
"ಮುಸ್ಲಿಂ ಸಮಾಜ ಹೆದರುವ ಪ್ರಶ್ನೆ ಇಲ್ಲ. ದೇಶದಲ್ಲಿ ಪೌರತ್ವ ಕಾಯ್ದೆ ಬಗ್ಗೆ ದೊಡ್ಡ ಚರ್ಚೆ ನಡೆದಿದೆ. ಕಾಯ್ದೆಯಲ್ಲಿ ಲೋಪದೋಶ ಇದ್ದರೆ ನಾನು ರಾಜ್ಯ ನಾಯಕರ ಜೊತೆಗೆ ಚರ್ಚೆಗೆ ಸಿದ್ಧ. ಮುಂದಿನ ಚುನಾವಣೆಗೆ ನಮ್ಮ ಜೊತೆಗೆ ಬನ್ನಿ" ಎಂದರು.
"ಮಾಧ್ಯಮದ ಮುಂದೆ ಮಾತನಾಡದಿರಲು ಆರ್ಎಸ್ಎಸ್ ಮುಖಂಡರೊಬ್ಬರು ನನಗೆ ಒಂದು ಸಲಹೆ ನೀಡಿದ್ದಾರೆ. ರಮೇಶ ಜಾರಕಿಹೊಳಿ ಸಿಟ್ಟಿನಿಂದ ಏನಾದ್ರು ಮಾತನಾಡುತ್ತಾನೆ ಎಂದು ಭಾವಿಸಿದ್ದರೆ ತಪ್ಪು. ನಾನು ಒಂದು ವರ್ಷದಿಂದ ಬಹಳಷ್ಟು ಕಲಿತಿದ್ದೇನೆ" ಎಂದು ಹೇಳಿದರು.
"ಸತೀಶ ಜಾರಕಿಹೊಳಿಗೆ ಮುಂದೆ ಸಿಎಂ ಆಗುವ ಯೋಗವಿದೆ. ಸಮಾಧಾನದಿಂದ ಇದ್ದರೆ ಒಳ್ಳೆಯದು. ಸತೀಶ್ 20 ವರ್ಷದಲ್ಲಿ ಏನು ಮಾಡಲಿಲ್ಲವೋ, ಅದನ್ನು ನಾನು 2 ವರ್ಷದಲ್ಲಿ ಮಾಡಿದ್ದೇನೆ.ಸಚಿವ ಸ್ಥಾನ ತಿರಸ್ಕರಿಸಿ ಗೋಕಾಕ್ಗೆ ಹೊರಟ್ಟಿದ್ದೆ. ಕುಮಟಳ್ಳಿ, ಬಾಲಚಂದ್ರ ಕಾರಣದಿಂದ ಸಚಿವನಾದೆ. ನಾನು ಬಾಲಚಂದ್ರ ಕೆಲಸ ಮಾಡಿದರೆ ಸೋಲು ಸಾಧ್ಯವಿಲ್ಲ. ಗೋಕಾಕ್ನಲ್ಲಿ ಲಖನ್ನಿಂದ ಅನ್ಯಾಯವಾಗಿರೋದು ಗೊತ್ತು. ಜಾರಕಿಹೊಳಿ ಸಹೋದರರು ಯಾವತ್ತಿಗೂ ಒಂದೇ" ಎಂದರು.