ಗೋಕಾಕ, ಫೆ 10 (Daijiworld News/MB) :ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದು ಒಳ್ಳೆಯದೆ ಆಯಿತು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಗೋಕಾಕಕ್ಕೆ ಭಾನುವಾರ ಬಂದ ಅವರು ಮಾತನಾಡಿ, "ಡಿಕೆಶಿ ಅಂದು ಅಪ್ಪಿಕೊಂಡಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ. ನನ್ನನ್ನು ಕಾಂಗ್ರೆಸ್ ನಾಯಕರು ನಿರ್ಲಕ್ಷ್ಯ ಮಾಡಿದ್ದು ಒಳ್ಳೆಯದೇ ಆಯಿತು. ನಾನು ಬಿಜೆಪಿಯಲ್ಲಿ ಸಚಿವನಾಗುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಜೊತೆಯಾಗಿ ಶಾಸಕ ಮಹೇಶ ಕುಮಠಳ್ಳಿ ಅಂಥವರು ಇದ್ದಲ್ಲಿ ಜಗತ್ತನ್ನೇ ಗೆಲ್ಲಬಹುದು. ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದ ಹೊರಬರಲು 36 ಶಾಸಕರು ಸಿದ್ಧವಾಗಿದ್ದೆವು . ಉಳಿದದ್ದು 17 ಮಂದಿ ಮಾತ್ರ’ ಎಂದರು.
ನಾನು ಸಚಿವ ಸ್ಥಾನ ತಿರಸ್ಕರಿಸಿ ಗೋಕಾಕಕ್ಕೆ ಹೊರಟಿದ್ದೆ. ಆದರೆ, ಶಾಸಕರಾದ ಮಹೇಶ ಕುಮಠಳ್ಳಿ, ಬಾಲಚಂದ್ರ ಜಾರಕಿಹೊಳಿ ಕಾರಣದಿಂದ ಪ್ರಮಾಣವಚನ ಸ್ವೀಕರಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ವರಿಷ್ಠ ಅಮಿತ್ ಶಾ ಅವರನ್ನು ನಂಬಿದ್ದೇನೆ. ನೀರಾವರಿ ಖಾತೆ ಕೊಡ್ತಾರೋ, ಲೈಬ್ರರಿ ಕೊಡುತ್ತಾರೋ ಗೊತ್ತಿಲ್ಲ. ಆರ್ಎಸ್ಎಸ್ ನಾಯಕರೂ ಸಹಕಾರ ನೀಡುತ್ತಿದ್ದಾರೆ ಎಂದರು.
ಗೋಕಾಕದಲ್ಲಿ ಕಾಂಗ್ರೆಸ್ನ ಲಖನ್ ಜಾರಕಿಹೊಳಿಯಿಂದ ಬಹಳ ಅನ್ಯಾಯವಾಗಿದೆ. ಕುಟುಂಬದ ವಿಚಾರ ಬಂದರೆ ಜಾರಕಿಹೊಳಿ ಸಹೋದರರು ಎಂದಿಗೂ ಒಂದೇ. ಹಿರಿಯ ಸಹೋದರನಾಗಿ ನೋವು ನುಂಗಬೇಕಾಗುತ್ತದೆ. ರಾಜಕೀಯವಾಗಿ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಗೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ. ಅವರು ತಾಳ್ಮೆಯಿಂದ ಇದ್ದರೆ ಒಳ್ಳೆಯದು. ಅವರು 20 ವರ್ಷಗಳಲ್ಲಿ ಮಾಡಲಾಗದ್ದನ್ನು ನಾನು ಎರಡೇ ವರ್ಷಗಳಲ್ಲಿ ಮಾಡಿದ್ದೇನೆ. ಒಳ್ಳೆಯದಕ್ಕಾಗಿ ಹಟ ಮಾಡುತ್ತೇನೆ’ ಎಂದರು.
ರಮೇಶ ಬಿಜೆಪಿಗೆ ಹೊಂದಿಕೊಳ್ಳುವುದಿಲ್ಲ ಎಂದು ಕೆಲವರು ಹಬ್ಬಿಸುತ್ತಿದ್ದಾರೆ. ರಾಜಕೀಯ ಸಾಕೆನಿಸಿದರೆ ಬಿಜೆಪಿಯಲ್ಲೇ ನಿವೃತ್ತಿಯಾಗುತ್ತೇನೆ. ಬಿಜೆಪಿ ಬಿಟ್ಟು ಬೇರೆಡೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಅವರನ್ನು ಅಭಿಮಾನಿಗಳು, ಸೇಬು ಹಣ್ಣುಗಳಿಂದ ಸಿದ್ಧಪಡಿಸಿದ 5 ಕ್ವಿಂಟಲ್ ತೂಕದ ಹಾರ ಹಾಕಿ ಬರಮಾಡಿಕೊಂಡರು. ಅಥಣಿ ಶಾಸಕ ಮಹೇಶ ಕುಮಠಳ್ಳಿ ಜೊತೆಗಿದ್ದರು.